ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಅದರಂತೆ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವಂತ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಕರ್ನಾಟಕ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಿ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ.
ಈ ಸಂಬಂಧ ಇಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.3000 ಹಾಗೂ ಡಿಪ್ಲೋಮಾ ಹೊಂದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1500 ರಂತೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿತ್ತು ಎಂದಿದ್ದಾರೆ.
2023ರ ವರ್ಷದಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ( ವೃತ್ತಿಪರ ಕೋರ್ಸ್ ಗಳು ಸೇರಿದಂತೆ) ಪ್ರತಿ ತಿಂಗಳು ರೂ.3000 ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1500 ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲು ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿವುದಾಗಿ ತಿಳಿಸಿದ್ದಾರೆ.
ಇನ್ನೂ ಈ ಯುವ ನಿಧಿ ಯೋಜನೆ ಸೌಲಭ್ಯ ಪಡೆಯಲು ಕೆಲ ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ಅದರಲ್ಲಿ ಪದವಿ, ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನುಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ.
ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು. ಭತ್ಯೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಾಲಾಭುವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಎಂದಿದೆ.