ಬೆಂಗಳೂರು: ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ, ವಾಹನ ಸವಾರರಿಗೆ ಕೆಲ ಸಲಹೆಗಳನ್ನು ಸಂಚಾರ ಪೊಲೀಸರಿಂದ ಬಿಡುಗಡೆ ಮಾಡಲಾಗಿದೆ.
ಈ ಕುರಿತಂತೆ ಬಂಗಳೂರು ನಗರ ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರುಗಳ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನಲೆಯಲ್ಲಿ ಸುಗಮ ಸಂಚಾರ ಏರ್ಪಡಿಸುವ ನಿಟ್ಟಿನಲ್ಲಿ ಸೂಕ್ತ ಸಂಚಾರ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಕ್ವೀನ್ಸ್ ವೃತ್ತದ ಕಡೆಯಿಂದ ಸಿದ್ಧಲಿಂಗಯ್ಯ ವೃತದ ಕಡೆಗೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಿದ್ದು, ರಸ್ತೆ ಬಳಕೆದಾರರು ಕ್ವೀನ್ಸ್ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು, ಲ್ಯಾವೆಲ್ಲೆ ರಸ್ತೆ ಅಥವಾ ಕ್ವೀನ್ಸ್ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ತೆರಳುವ ವಾಹನಗಳನ್ನು ಪಟ್ಟಾ ಜಂಕ್ಷನ್ ನಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ಡೈವರ್ಷನ್ ಮಾಡುವುದರಿಂದ ಬಿಎಂಟಿಸಿ ಹಾಗೂ ಇತರೆ ವಾಹನಗಳು ಪೊಲೀಸ್ ತಿಮ್ಮಯ್ಯ ವೃತ್ತದಲ್ಲಿ ಎಡ ತಿರುವು ಪಡೆದು ಕೆ ಆರ್ ಸರ್ಕಲ್ ಮುಖೇನ ಸಂಚಿರಸಬಹುದಾಗಿರುತ್ತದೆ ಎಂದಿದ್ದಾರೆ.