ಬೆಂಗಳೂರು ;- ಆರ್.ಟಿ.ನಗರ ಪೊಲೀಸರಿಂದ ಶಂಕಿತ ಉಗ್ರ ಜುನೈದ್ ಸಹಚರನನ್ನು ಬಂಧಿಸಲಾಗಿದೆ. ಮೊಹಮ್ಮದ್ ಅರ್ಷದ್ ಖಾನ್ ಬಂಧಿತ ಆರೋಪಿ.
ಈ ಮೊಹಮ್ಮದ್ ಅರ್ಷದ್ ಖಾನ್ 2017 ರಲ್ಲಿ ನೂರ್ ಅಹಮ್ಮದ್ ಎಂಬಾತ ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಪ್ರಕರಣದ ಆರೋಪಿಯಾಗಿದ್ದು, ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದನು.
ಈ ವೇಳೆ ಮೊಹಮ್ಮದ್ ಅರ್ಷದ್ ಖಾನ್ ಅಪ್ರಾಪ್ತನಾಗಿದ್ದು, ಸಾಕಷ್ಟು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಈತನ ವಿರುದ್ಧ ಕೊಲೆ, ಕೊಲೆಯತ್ನ, ಕಳ್ಳತನ ಸೇರಿದಂತೆ 17 ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ಅರ್ಷದ್ ಖಾನ್ ಬಂಧಿಸಲು ಆರ್.ಟಿ.ನಗರ ಪೊಲೀಸ್ ಠಾಣೆಯ ಪಿಎಸ್‌ಐ ವಿನೋದ್ ನಾಯಕ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಈ ತಂಡಕ್ಕೆ ಆ. 27 ರ ಮುಂಜಾನೆ ಐದು ಗಂಟೆಗೆ ಅರ್ಷದ್ ಆರ್.ಟಿ.ನಗರದ ಮನೆಯೊಂದರಲ್ಲಿ ವಾಸವಾಗಿರುವ ಮಾಹಿತಿ ತಿಳಿದುಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅರ್ಷದ್ ಖಾನ್ ಮನೆಯನ್ನ ಸುತ್ತುವರೆದಿದ್ದಾರೆ. ನಂತರ ಆತನ ಮನೆ ಸುತ್ತಮುತ್ತಲಿನ ಸಿಸಿಟಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಪೊಲೀಸರಿಗೆ ಅರ್ಷದ್ ಮನೆಗೆ ಬಂದಿದ್ದಾನೆ ಎಂಬುದನ್ನ ಖಚಿತವಾಗಿದೆ.
ಅರ್ಷದ್ ಮನೆಯೊಳಗೆ ಇರುವುದು ಖಾತ್ರಿಯಾಗುತ್ತಿದ್ದಂತೆ ಪೊಲೀಸರು ಆಪರೇಷನ್ ಶುರು ಮಾಡಿಕೊಂಡಿದ್ದಾರೆ. ಮನೆ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡಿದ್ದ ಅರ್ಷದ್ ಕತ್ತು ಕೊಯ್ದುಕೊಳ್ಳಲು ಮುಂದಾಗಿದ್ದಾನೆ. ಅಲ್ಲದೇ ಎರಡನೇ ಮಹಡಿಯಿಂದ ಕೆಳಗೆ ಜಿಗಿಯಲು ಮೇಲೆ ಹೋಗುತ್ತಿರುವಾಗ ಪೊಲೀಸರು ಆತನನ್ನು ಅಡ್ಡಗಟ್ಟಿ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಅರ್ಷದ್ ಖಾನ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.