ನವದೆಹಲಿ: ಸಮವಸ್ತ್ರ ಧರಿಸಿದ ಫೋಟೊಗಳನ್ನು ಹಾಗೂ ರೀಲ್ಸ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡದಂತೆ ಕೇಂದ್ರೀಯ ಮೀಸಲು ಪಡೆಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಅಪರಿಚಿತರೊಡನೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸದಂತೆ ಸೂಚಿಸಲಾಗಿದೆ. ಹೌದು ಹನಿಟ್ರ್ಯಾಪ್ಗೆ ಒಳಗಾಗಿ ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಭೀತಿ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಮೀಸಲು ಪಡೆಯ ಹಲವು ಯೋಧರು ಸಮವಸ್ತ್ರದಲ್ಲಿ ಸೂಕ್ಷ್ಮ ಸ್ಥಳಗಳಿಂದ ವೀಡಿಯೋ ಮತ್ತು ಫೋಟೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದು ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಎಚ್ಚರಿಕೆಯ ಬಳಿಕ ಭದ್ರತಾ ಪಡೆಗಳಿಗೆ ಆಯಾ ವಿಭಾಗದ ಮುಖ್ಯಸ್ಥರಿಂದ ಈ ಸೂಚನೆ ನೀಡಲಾಗಿದೆ.
ಸಿಆರ್ಪಿಎಫ್, ಬಿಎಸ್ಎಫ್, ಐಟಿಬಿಪಿ, ಸಿಐಎಸ್ಎಫ್ ಸೇರಿದಂತೆ ಎಲ್ಲಾ ಮೀಸಲು ಪಡೆಗಳಿಗೆ ಈ ಸೂಚನೆ ರವಾನಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ನಲ್ಲಿ ಸೈನಿಕರು ಸಮವಸ್ತ್ರದಲ್ಲಿ ತಮ್ಮ ಪೋಟೋ ಹಾಗೂ ವೀಡಿಯೊಗಳನ್ನು ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಆಯಾ ವಿಭಾಗದ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.
ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ವ್ಯಕ್ತಿಯ ಪರಿಶೀಲನೆಯಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತರನ್ನಾಗಿ ಮಾಡಿಕೊಳ್ಳಬಾರದು. ಈ ಸೂಚನೆಗಳ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.