ಬೆಂಗಳೂರು: ಪರಿಶಿಷ್ಟ ವರ್ಗಗಳ ಯಾವುದೇ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗದಂತೆ ಗುಣಾತ್ಮಕ ಶಿಕ್ಷಣ ನೀಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಬಿ. ನಾಗೇಂದ್ರ ಸೂಚನೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಕಚೇರಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮುದಾಯದವು ಸಾಕ್ಷರತೆಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಬೇಕು. ಸಮಾಜದ ಪ್ರತಿಯೊಬ್ಬ ಮಗುವು ಉನ್ನತ ಶಿಕ್ಷಣ ಪಡೆದು ಸ್ವಾವಲಂಭಿಯಾಗಿ ಮಾದರಿ ಜೀವನ ಸಾಗಿಸುವಂತಾಗಬೇಕು. ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಕಂಪ್ಯೂಟರ್ ಶಿಕ್ಷಣ, ತಾಂತ್ರಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ನೀಡಿ, ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇಲಾಖೆಯು ಶಿಕ್ಷಣಕ್ಕೆ ಆದ್ಯತೆ ನೀಡಿ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇಲಾಖೆಯ ಬಲವರ್ಧನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.