ಹಿಂದೂ- ಮುಸ್ಲಿಮರಿಗೆ ಪ್ರತ್ಯೇಕ ಕಾನೂನುಗಳು ಸಾಧ್ಯವಿಲ್ಲ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಪಾಟ್ನಾ: ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆಯನ್ನು ರದ್ದುಪಡಿಸುವುದಾಗಿ ಅಸ್ಸಾಂ (Assam) ಸಚಿವ ಸಂಪುಟ ಘೋಷಿಸಿದ ನಂತರ ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Giriraj Singh) ಅಸ್ಸಾಂ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹಿಂದೂ (Hindus) ಮತ್ತು ಮುಸ್ಲಿಮರಿಗೆ (Muslims) ಪ್ರತ್ಯೇಕ ಕಾನೂನುಗಳು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆಯನ್ನು (UCC) ತಂದಿದೆ. ಈಗ ಅಸ್ಸಾಂನಲ್ಲಿ ಎಲ್ಲರೂ ಒಂದು ಕಾನೂನನ್ನು ಅನುಸರಿಸಿದರೆ ಅದು ಪ್ರಯೋಜನಕಾರಿಯಾಗಿದೆ. ಹಿಂದೂಗಳು ಮತ್ತು ಮುಸ್ಲಿಮರಿಗೆ ವಿಭಿನ್ನ ಕಾನೂನುಗಳು ಸಾಧ್ಯವಾಗುವುದಿಲ್ಲ. ಆ ರೀತಿಯಲ್ಲಿ ದೇಶವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.

ಅಸ್ಸಾಂ ಸರ್ಕಾರದ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದು ನಿರ್ಧಾರವನ್ನು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನಾಯಕ ರಫೀಕುಲ್ ಇಸ್ಲಾಂ ಟೀಕಿಸಿದ್ದಾರೆ. ಇದು ಮುಸ್ಲಿಮರನ್ನು ಗುರಿಯಾಗಿಸುವ ತಂತ್ರ ಎಂದು ಆರೋಪಿಸಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ತರಲು ಧೈರ್ಯ ಹೊಂದಿಲ್ಲ. ಆದ್ದರಿಂದ ವಿವಾಹ ಕಾಯ್ದೆಯನ್ನು ರದ್ದುಗೊಳಿಸಿದೆ. ಉತ್ತರಾಖಂಡದಲ್ಲಿ ತಂದದ್ದು ಯುಸಿಸಿಯೂ ಅಲ್ಲ.

ಅಸ್ಸಾಮಿಗೂ ಯುಸಿಸಿ ತರಲು ಯತ್ನಿಸುತ್ತಿದ್ದರು. ಆದರೆ ಅವರು ಅದನ್ನು ಅಸ್ಸಾಂಗೆ ತರಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇಲ್ಲಿ ಹಲವಾರು ಜಾತಿಗಳು ಮತ್ತು ಸಮುದಾಯಗಳ ಜನರಿದ್ದಾರೆ. ಬಿಜೆಪಿ ಅನುಯಾಯಿಗಳು ಇಲ್ಲಿ ಆ ಆಚರಣೆಗಳನ್ನು ಅನುಸರಿಸುತ್ತಾರೆ. ಚುನಾವಣೆಗಳು ಸಮೀಪಿಸುತ್ತಿವೆ. ಇದು ಮುಸ್ಲಿಮರನ್ನು ಗುರಿಯಾಗಿಸುವ ಅವರ ತಂತ್ರವಾಗಿದೆ ಎಂದು ರಫೀಕುಲ್‌ ಟೀಕಿಸಿದ್ದಾರೆ.

Loading

Leave a Reply

Your email address will not be published. Required fields are marked *