ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರನ್ನು ಸಿಲುಕಿಸುವ ಪ್ರಯತ್ನ: ಪ್ರಮೋದ್ ಮುತಾಲಿಕ್

ಧಾರವಾಡ: ಗೋವಿಂದರಾಜ ಪೂಜಾರಿ ಎಂಬುವವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಅವರ ಪರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬ್ಯಾಟ್ ಬೀಸಿದ್ದಾರೆ.
ಕೋಟಿ ಕೋಟಿ ವಂಚನೆ ಹಿನ್ನೆಲೆಯಲ್ಲಿ ಈಗಾಗಲೇ ಚೈತ್ರಾ ಕುಂದಾಪುರ ಅವರ ಬಂಧನವಾಗಿದೆ. ಚೈತ್ರಾ ಕುಂದಾಪುರ ಈ ವಂಚನೆ ಮಾಡಿಲ್ಲ ಎಂಬ ನಂಬಿಕೆ ಇದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ. ತಪ್ಪಿತಸ್ಥರಿದ್ದರೆ ಶಿಕ್ಷೆಯಾಗಲಿ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಮುತಾಲಿಕ್, ಎಲ್ಲೋ ಒಂದು ಕಡೆ ಷಡ್ಯಂತ್ರ ನಡೆದಿದೆ. ಚೈತ್ರಾ ಷಡ್ಯಂತ್ರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ. ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತೇವೆ ಎಂಬ ಭರವಸೆಗಳನ್ನು ಕಾಂಗ್ರೆಸ್ನವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದರು. ಬಜರಂಗದಳ ಒಂದು ನೆಪ ಮಾತ್ರ. ಕಾಂಗ್ರೆಸ್ನವರು ಹಿಂದೂಪರ ಸಂಘಟನೆಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಪುನಿತ್ ಕೆರೆಹಳ್ಳಿ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಈ ಕಾಯ್ದೆ ಹಾಕುವ ಅವಶ್ಯಕತೆ ಇರಲಿಲ್ಲ. ರಾಜ್ಯದಲ್ಲಿ ಇನ್ನೂ ಅನೇಕ ಹಿಂದೂ ಕಾರ್ಯಕರ್ತರ ಮೇಲೆ ಪಿತೂರಿ ನಡೆದಿದೆ. ಚೈತ್ರಾ ಕುಂದಾಪುರ ಬಂಧನದ ಹಿಂದೆ ಸಂಶಯಾಸ್ಪದ ಚಟುವಟಿಕೆಗಳು ನಡೆದಿವೆ. ಕೋರ್ಟ್ ಏನು ತೀರ್ಪು ಕೊಡುತ್ತೋ ಅದಕ್ಕೆ ನಾವು ಬದ್ಧ ಎಂದಿದ್ದಾರೆ.
ಚೈತ್ರಾ ನಿರ್ದೋಷಿಯಾಗಿ ಹೊರಬರುತ್ತಾರೆ. ಹಾಲಪ್ಪಜ್ಜ ಸ್ವಾಮೀಜಿಯವರ ಹೆಸರೂ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಸ್ವಾಮೀಜಿಯನ್ನು ನಾನು ಹತ್ತಿರದಿಂದ ಬಲ್ಲೆ. ಅವರದ್ದು ದೊಡ್ಡ ಮಠ. ಅವರೂ ನಿರ್ದೋಷಿಯಾಗಿ ಹೊರ ಬರುತ್ತಾರೆ. ವ್ಯವಸ್ಥಿತವಾಗಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ತಪ್ಪಿತಸ್ಥರಿದ್ದರೆ ಶಿಕ್ಷೆಯಾಗಲಿ ಎಂದರು.
ಗೋವಿಂದರಾಜ ಪೂಜಾರಿ ಬಿಜೆಪಿ ಟಿಕೆಟ್ ಕೇಳಿದ್ದರು. ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ನ ಕೂಸು. ಈ ಇಂದಿರಾ ಕ್ಯಾಂಟೀನ್ ಟೆಂಡರ್ನ್ನು ಬಿಜೆಪಿಯವರಿಗೆ ಯಾಕೆ ಟೆಂಡರ್ ಕೊಟ್ಟರು? ಮುಸ್ಲಿಂ ಮನೆಯಲ್ಲಿ ಚೈತ್ರಾ ಸಿಕ್ಕಿಬಿದ್ದಿದ್ದಾಳೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ತನಿಖೆಯಾಗಬೇಕು. ಕೋರ್ಟ್ ಆದೇಶವನ್ನು ನಾವು ಪಾಲಿಸಬೇಕು ಎಂದರು.

Loading

Leave a Reply

Your email address will not be published. Required fields are marked *