ಮಂಗಳೂರು: ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚುತ್ತಿದ್ದು, ಕಾಂಗ್ರೆಸ್ ಸರಕಾರ ಅವರ ಮೇಲೆ ಸಹಾನುಭೂತಿ ವ್ಯಕ್ತಪಡಿಸಿ ದೇಶಭಕ್ತರ ಮೇಲೆ, ಕರಾವಳಿ ಜಿಲ್ಲೆಗಳ ಹಿಂದೂ ಸಮುದಾಯದವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರ.
ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಇತ್ತೀಚೆಗೆ ಕೋಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಅಥವಾ ಪರಿಷತ್ನಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡುವುದಕ್ಕೆ ಕೇಂದ್ರದ ನಾಯಕರು ತಿರ್ಮಾನ ಕೈಗೊಳ್ಳಲಿದ್ದಾರೆ. ನಮ್ಮಲ್ಲಿ66 ಶಾಸಕರು ಸಮರ್ಥರಿದ್ದು, ಆದ್ದರಿಂದ ಸಾಮೂಹಿಕ ನಾಯಕತ್ವದಡಿ ಹೊರಟ ನಡೆಸುತ್ತೇವೆ. ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ನಮ್ಮ ನಾಯಕರು ಯಶಸ್ವಿಯಾಗಿ ಪ್ರತಿಭಟಿಸುತ್ತಿದ್ದಾರೆ ಎಂದರು.
ಜೆಡಿಎಸ್ ಮೈತ್ರಿ ಕುರಿತಂತೆ ಉತ್ತರಿಸಿದ ಕಟೀಲ್ ನಮ್ಮ ಪ್ರತಿ ನ್ಯಾಯಯುತ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಸಹಕಾರ ನೀಡುತ್ತಿದೆ. ರಾಷ್ಟ್ರೀಯ ನಾಯಕರ ಚಿಂತನೆಯೊಂದಿಗೆ ಮೈತ್ರಿ ತಿರ್ಮಾನಗೊಳ್ಳುತ್ತದೆ. ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಂತೆ ನಮ್ಮ ಅವಧಿ ಈಗಾಗಲೆ ಪೂರ್ಣಗೊಂಡಿದೆ. ರಾಷ್ಟ್ರೀಯ ನಾಯಕರು ಸಮರ್ಥ ನಾಯಕರನ್ನು ಆಯ್ಕೆಗೊಳಿಸುತ್ತಾರೆ ಎಂದರು.