ನವದೆಹಲಿ: ನೆಹರೂ ಸ್ಮಾರಕ (Nehru Memorial) ವಸ್ತುಸಂಗ್ರಹಾಲಯವನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (Prime Ministers’ Museum and Library) ಸೊಸೈಟಿ ಎಂದು ಅಧಿಕೃತವಾಗಿ ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ. ವಸ್ತುಸಂಗ್ರಹಾಲಯದ ಉಪಾಧ್ಯಕ್ಷ ಎ. ಸೂರ್ಯ ಪ್ರಕಾಶ್ ಅವರು ಈ ಬಗ್ಗೆ ತಮ್ಮ ಟ್ವಿಟ್ಟರ್ (ಎಕ್ಸ್) ಖಾತೆಯಲ್ಲಿ ತಿಳಿಸಿದ್ದಾರೆ. ಆ.14 ರಿಂದ ಅಧಿಕೃತವಾಗಿ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸಂಸ್ಥೆಯ ಹೆಸರು ಬದಲಾಗಿದೆ. ಪ್ರಜಾಪ್ರಭುತ್ವೀಕರಣ ಮತ್ತು ವೈವಿಧ್ಯೀಕರಣಕ್ಕೆ ಅನುಗುಣವಾಗಿ ಹೆಸರನ್ನು ಬದಲಾಯಿಸಲಾಗಿದೆ ಎಂದು ಸೂರ್ಯ ಪ್ರಕಾಶ್ ತಿಳಿಸಿದ್ದಾರೆ.
ಜೂನ್ ಮಧ್ಯಭಾಗದಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಈ ವಸ್ತುಸಂಗ್ರಹಾಲಯದ ಹೆಸರು ಬದಲಾವಣೆ ಮಾಡುವ ಕುರಿತು ನಿರ್ಧರಿಸಲಾಗಿತ್ತು. ಸೊಸೈಟಿಯ ಮತ್ತೊಬ್ಬ ಉಪಾಧ್ಯಕ್ಷರಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯ ವಿಶೇಷ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಕಳೆದ ವರ್ಷ ಏಪ್ರಿಲ್ 21 ರಂದು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಉದ್ಘಾಟನೆ ಸಂದರ್ಭದಲ್ಲಿ ಸರ್ಕಾರದಿಂದ ಆಹ್ವಾನ ಬಂದಿದ್ದರೂ ನೆಹರೂ-ಗಾಂಧಿ ಕುಟುಂಬದ ಯಾವುದೇ ಸದಸ್ಯರು ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.