ಅಮರಾವತಿ: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ಮಂಗಳವಾರ ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ. ಟಿಡಿಪಿ ಕಾನೂನು ತಂಡವು ಹೈಕೋರ್ಟ್ನಲ್ಲಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದೆ. ಟಿಡಿಪಿ ಕಾನೂನು ಸಲಹೆಗಾರ ಸುಪ್ರೀಮ್ ಸಿದ್ದಾರ್ಥ್ ಲೂತ್ರಾ ಅವರು ತಮ್ಮ ವಾದವನ್ನು ವಾಸ್ತವಿಕವಾಗಿ ಮಂಡಿಸಿದರು.
ಕೌಶಲ್ಯಾಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ವಿಜಯವಾಡದ ಭ್ರಷ್ಟಾಚಾರ ನಿಗ್ರಹ ದಳ (ACB) ನ್ಯಾಯಾಲಯವು ಸೆಪ್ಟೆಂಬರ್ 23ರವರೆಗೆ ಚಂದ್ರಬಾಬು ನಾಯ್ಡುವನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ನಾಯ್ಡು ಅವರನ್ನು ಬಂಧಿಸಿರುವ ಪ್ರಕರಣವು ಆಂಧ್ರಪ್ರದೇಶದಲ್ಲಿರುವ ಸೆಂಟರ್ಸ್ ಆಫ್ ಎಕ್ಸಲೆನ್ಸ್ (COE) ಕ್ಲಸ್ಟರ್ಗಳ ಸ್ಥಾಪನೆಗೆ ಸಂಬಂಧಿಸಿದ್ದು, ಒಟ್ಟು ಅಂದಾಜು ಯೋಜನಾ ಮೌಲ್ಯ 3,300 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಕ್ರಮದಿಂದ ರಾಜ್ಯ ಸರ್ಕಾರಕ್ಕೆ 300 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.