ಬೆಂಗಳೂರು: ನನ್ನ ಪಕ್ಷಾಂತರ ಪ್ರಭಾವ ಪಂಚರಾಜ್ಯ ಚುನಾವಣೆ ಮೇಲೂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು. ಈ ಸಂಬಂಧ ಮಾತನಾಡಿದ ಅವರು,ನನ್ನ ಪಕ್ಷಾಂತರದ ಪ್ರಭಾವ ಈಗ ಪಂಚರಾಜ್ಯಗಳ ಚುನಾವಣೆಯ ಮೇಲೂ ಆಗಿದೆ. ಹಾಗಾಗಿಯೇ ಅಲ್ಲಿ 80 ವರ್ಷ ವಯಸ್ಸು ದಾಟಿದವರಿಗೂ ಬಿಜೆಪಿ ಟಿಕೆಟ್ ನೀಡಿದೆ ಎಂದರು
ಕರ್ನಾಟಕದಲ್ಲಿ ಹಿರಿಯರ ನಿರ್ಲಕ್ಷಿಸಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಹೀಗಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಈಗ ಹಿರಿಯರಿಗೆ ಮಣೆ ಹಾಕಲಾಗಿದೆ. ಎಲ್ಲ ರಾಜ್ಯಗಳಲ್ಲೂ ನಿಯಮ ಒಂದೇ ಅನ್ವಯ ಆಗಬೇಕಲ್ಲವೆ? ಎಂದವರು ಪ್ರಶ್ನಿಸಿದರು.ಈಚೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರನ್ನು ದೆಹಲಿಗೆ ಕರೆಸಿ 3 ದಿನ ಕಾಯಿಸಿದರು. ಐದು ನಿಮಿಷ ಮಾತನಾಡುವಷ್ಟು ಸೌಜನ್ಯ ವರಿಷ್ಠರು ತೋರಲಿಲ್ಲ ವೇಕೆ? ಇನ್ನು, ವಯಸ್ಸಿನ ನೆಪದಲ್ಲಿ ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರನ್ನು ಮನೆಗೆ ಕಳುಹಿಸಿದರು. ಆದರೆ, 3-4 ಮಾಜಿ ಮುಖ್ಯಮಂತ್ರಿಗಳೂ ಸೇರಿ, ಈಗ 80 ವರ್ಷ ಆದವರಿಗೂ ಟಿಕೆಟ್ ನೀಡಿದ್ದಾರೆ. ಇದಕ್ಕೆ ಮೂಲ ಕಾರಣ ಜಗದೀಶ್ ಶೆಟ್ಟರ್ ಪ್ರಭಾವ ಎಂದವರು ಪ್ರತಿಪಾದಿಸಿದರು.
ಬಿಜೆಪಿಯು ಇಂದು ಹೀನಾಯ ಸ್ಥಿತಿಗೆ ತಲುಪಿದೆ. ಬಿ.ವೈ.ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರೂ ಬರಲಿಲ್ಲ. ವೀಕ್ಷಕರು ಸಹ ಬಂದಿರಲಿಲ್ಲ. ಇನ್ನು, ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿಗಳ್ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ. ರಾಜ್ಯ ಬಿಜೆಪಿ ಪರಿಸ್ಥಿತಿಗೆ ಇದೇ ಸಾಕ್ಷಿ ಎಂದರು.