ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಸಬೇಡಿ. ಎಲ್ಲರೂ ಮನೆಯಲ್ಲೇ ಇರಿ ಎಂದು ಮುಸ್ಲಿಮರಿಗೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ (Badruddin Ajmal) ಕರೆ ನೀಡಿದ್ದಾರೆ.
ದಾರುಲ್ ಉಲೂನ್ ದಿಯೋಬಂದ್‌ನ ಹಳೆಯ ವಿದ್ಯಾರ್ಥಿಯೂ ಆಗಿರುವ ಅಜ್ಮಲ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ದೇಶದಾದ್ಯಂತ ಕರಸೇವಕರ (ಸ್ವಯಂಸೇವಕರ) ದೊಡ್ಡ ಚಳುವಳಿ ಇರುತ್ತದೆ. ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಘಟನೆಗಳು ಪುನರಾವರ್ತನೆಯಾಗುವುದನ್ನು ನಾವು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಮುಸ್ಲಿಂ ಸಹೋದರರ ಹಿತಾಸಕ್ತಿ ಮತ್ತು ದೇಶದ ಶಾಂತಿಗಾಗಿ ಮುಸ್ಲಿಮರು ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ ಮತ್ತು ಈ ಅವಧಿಯಲ್ಲಿ ಮನೆಯಲ್ಲೇ ಇರುವುದು ಸೂಕ್ತ ಎಂದು ಹೇಳಿದ್ದಾರೆ. ಭಾರತದಾದ್ಯಂತ ಸ್ವಯಂಸೇವಕರು ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಯುವಕರಿರುವ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಒಂದೆರಡು ಮುಸ್ಲಿಮರು ಸಿಕ್ಕಿಹಾಕಿಕೊಂಡರೆ ಸಮಸ್ಯೆಯಾಗಬಹುದು. ಇದು ಕೋಮುವಾದ ಎಂದು ಕೆಲವರು ಭಾವಿಸಿದರೆ ಅದು ತಪ್ಪು. ಯಾವುದೇ ರೀತಿಯ ಘರ್ಷಣೆಯಾಗದಂತೆ ಜನರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.