ಐಪಿಎಲ್ ಆವೃತ್ತಿಯಲ್ಲಿ 4 ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಎಂ.ಎಸ್. ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠ ಗುಜರಾತ್ ಟೈಟಾನ್ಸ್‌ಗೆ (GT) ಮಣ್ಣುಮುಕ್ಕಿಸಿ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ 5 ಬಾರಿ ಐಪಿಎಲ್ ಕಪ್ ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನ ಸರಿಗಟ್ಟಿದೆ.
ಗುಜರಾತ್ ಟೈಟಾನ್ಸ್ ತಾನು ಆಡಿದ 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಗೆಲುವಿಗೆ 215 ರನ್‌ಗಳ ಅಸಾಧ್ಯದ ಗುರಿ ಬೆನ್ನತ್ತಿದ ಸಿಎಸ್‌ಕೆ ಬ್ಯಾಟಿಂಗ್ ಆರಂಭಿಸಿ 3 ಎಸೆತಗಳನ್ನು ಎದುರಿಸುತ್ತಿದ್ದಂತೆಯೇ ಧಾರಾಕಾರ ಮಳೆ ಶುರುವಾಗಿ ಆಟಕ್ಕೆ ಅಡಚಣೆ ಎದುರಾಯಿತು. 2 ಗಂಟೆಗಳ ಕಾಲ ಆಟ ಸ್ಥಗಿತಗೊಂಡು 12:10ಕ್ಕೆ ಮರಳಿ ಶುರುವಾದಾಗ ಸಿಎಸ್‌ಕೆಗೆ 15 ಓವರ್‌ಗಳಲ್ಲಿ 171 ರನ್‌ಗಳ ಕಠಿಣ ಗುರಿ ಪಡೆದಿತ್ತು.
ಗೆಲ್ಲಲು ಓವರ್‌ಗೆ 12 ರನ್ ಗಳಿಸುವ ಒತ್ತಡಕ್ಕೆ ಸಿಲುಕಿದ್ದ ಸಿಎಸ್‌ಕೆ, ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಕೈ ಹಾಕಿತ್ತು. ಋತುರಾಜ್ ಗಾಯಕ್ವಾಡ್ (26), ಡೆವೋನ್ ಕಾನ್ವೇ (47), ಶಿವಂ ದುಬೇ (32*), ಅಜಿಂಕ್ಯ ರಹಾನೆ (27), ರವೀಂದ್ರ ಜಡೇಜಾ (15*) ಮತ್ತು ಅಂಬಾಟಿ ರಾಯುಡು (19) ಬೌಲರ್‌ಗಳನ್ನು ಬೆಂಡೆತ್ತಿದ ಪರಿಣಾಮ ಸಿಎಸ್‌ಕೆಗೆ ಗೆಲುವು ಸಾಧ್ಯವಾಯಿತು. ಟೈಟನ್ಸ್ ಪರ ನೂರ್ ಅಹ್ಮದ್ (17ಕ್ಕೆ 2) ಮತ್ತು ಮೋಹಿತ್ ಶರ್ಮಾ (36ಕ್ಕೆ 3) ವಿಕೆಟ್ ಪಡೆದು ಒತ್ತಡ ಹೇರಿದರೂ, ಅದೃಷ್ಟ ಸಿಎಸ್‌ಕೆ ಕೈಹಿಡಿದಿತ್ತು. ಈ ಜಯದೊಂದಿಗೆ ಸಿಎಸ್‌ಕೆ ಐಪಿಎಲ್‌ನಲ್ಲಿ ಅತಿ ಹೆಚ್ಚು (5) ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ.
ಟೈಟನ್ಸ್ ಬೃಹತ್ಮೊತ್ತ
ಟಾಸ್ ಸಾತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ಸ್ಪೋಟಕ ಆರಂಭ ಪಡೆಯಿತು. ಆರಂಭದಲ್ಲೇ ಸಿಕ್ಕ ಜೀವದಾನ ಬಳಸಿಕೊಂಡ ಶೂಭಮನ್ ಗಿಲ್, 28 ಎಸೆತಗಳಲ್ಲಿ 37 ರನ್ ಸಿಡಿಸಿದರು. ಮತ್ತೊಂದು ದೊಡ್ಡ ಇನಿಂಗ್ಸ್ ಆಡುವ ಸುಳಿವು ನೀಡಿದ್ದರಾದರೂ, ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಎಂಎಸ್ ಧೋನಿ ಅವರ ವಿಕೆಟ್‌ಕೀಪಿಂಗ್ ಕಲೆಗಾರಿಕೆಯ ಎದುರು ಸ್ಟಂಪ್‌ಔಟ್ ಆಗಿ ನಿರಾಶೆ ಅನುಭವಿಸಿದರು. ಟೈಟನ್ಸ್ ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 66 ರನ್ ಕಲೆಹಾಕಿತ್ತು. ಮತ್ತೊಬ್ಬ ಓಪನರ್ ವೃದ್ಧಿಮಾನ್ ಸಹಾ (54) ಬಿರುಸಿನ ಅರ್ಧಶತಕ ಬಾರಿಸಿದರು.
ಇನಿಂಗ್ಸ್ ಆರಂಭದಲ್ಲಿ ರನ್ ಹೆಕ್ಕಲು ಕಷ್ಟ ಪಟ್ಟಿದ್ದ ಯುವ ಬ್ಯಾಟರ್ ಸಾಯ್ ಸುದರ್ಶನ್ 10 ಎಸೆತಗಳಲ್ಲಿ 8 ರನ್ ಗಳಿಸಿದ್ದರು. ಆದರೆ, ನಿಧಾನವಾಗಿ ರನ್ ಗಳಿಕೆಯ ವೇಗ ಹೆಚ್ಚಿಸಿಕೊಂಡು 47 ಎಸೆತಗಳಲ್ಲಿ 96 ರನ್ ಸಿಡಿಸಿ ಟೈಟನ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಗುಜರಾತ್ ಟೈಟನ್ಸ್ ತನ್ನ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್‌ಗಳ ಶಿಖರ ನಿರ್ಮಿಸಿತು. ಸ್ಲಾಗ್ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ, 12 ಎಸೆತಗಳಲ್ಲಿ ಅಜೇಯ 21 ರನ್ ಸಿಡಿಸಿದರು.
ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಎದುರು ಪೈಫೋಟಿ ಕಾದಾಟ ನಡೆಸಲಿದೆ. ಮಳೆ ಕಾರಣ ಭಾನುವಾರ (ಮೇ 28) ಪಂದ್ಯ ಟಾಸ್ ಕೂಡ ಕಾಣಲಿಲ್ಲ. ಹೀಗಾಗಿ ಮುಂದೂಡಲ್ಪಟ್ಟ ಪಂದ್ಯದಲ್ಲಿ ಟ್ರೋಫಿ ರಾರಿಗೆ ಒಲಿಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಟಾಸ್ ಗೆದ್ದ ಎಂಎಸ್ ಧೋನಿ, ಚೇಸಿಂಗ್ ಆಯ್ಕೆ ಮಾಡಿಕೊಂಡರು.