ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ; ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ 2202 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಕೆ

ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಕೋರ್ಟಿಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. 2023 ರ ನವೆಂಬರ್ 12ರಂದು ಸಂತೆಕಟ್ಟೆ ನೇಜಾರು ಸಮೀಪದ ತೃಪ್ತಿ ಲೇಔಟ್‌ನಲ್ಲಿ ಕೊಲೆ ನಡೆದಿತ್ತು. ವಿದೇಶದಲ್ಲಿದ್ದ ನೂರ್ ಮಹಮ್ಮದ್ ಕುಟುಂಬದ ನಾಲ್ವರ ಕೊಲೆಯಾಗಿತ್ತು. ಏರ್ ಇಂಡಿಯಾ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗುಲೆ ಬರ್ಬರವಾಗಿ ನಾಲ್ವರ ಹತ್ಯೆ ಮಾಡಿದ್ದ.

ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಯ್ನಸ್ ಮೇಲೆ ಇದ್ದ ಅತಿಯಾದ ಗೆಳೆತನ, ಪ್ರೀತಿ (Love), ವ್ಯಾಮೋಹ, ಕೆಲ ಸಮಯ ನಂತರ ಆಕೆ ಆತನನ್ನು ದೂರ ಮಾಡಿದ್ದಕ್ಕಾಗಿ ಹುಟ್ಟಿಕೊಂಡ ದ್ವೇಷಕ್ಕೆ ಪ್ರವೀಣ್ ಈ ಕೃತ್ಯ ಎಸಗಿದ್ದಾನೆ ಎಂಬ ವಿಚಾರ ತನಿಖೆಯಿಂದ ಪ್ರಕಟವಾಗಿದೆ.

ಮಗಳ ಮೇಲೆ ಮುಗಿಬಿದ್ದಾಗ ತಡೆಯಲು ಬಂದ ತಾಯಿ ಹಸೀನಾ, ಅಕ್ಕ ಅಫ್ನಾನ್ ಮತ್ತು ತಮ್ಮ ಆಸಿಂನನ್ನು ಇರಿದು ಕೊಂದಿದ್ದ. ತಲೆಮರೆಸಿಕೊಂಡು ಓಡಾಡಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲೆಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸಾಕ್ಷಾಧಾರಗಳನ್ನು ಪೊಲೀಸರು ಸಂಗ್ರಹ ಮಾಡಿದ್ದರು. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿದ್ದರು. ಕುಟುಂಬದ ಆಪ್ತರು ಮತ್ತು ಸಾರ್ವಜನಿಕರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ಚಾರ್ಜ್ಶೀಟ್ನಲ್ಲಿ ಏನಿದೆ?
300 ಸಾಕ್ಷಿಗಳಿರುವ 2,250 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಿಸಿಟಿವಿ, ಫೋನ್ ಕರೆ, ಹೇಳಿಕೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳೇ ಪ್ರಮುಖ ಸಾಕ್ಷಿಗಳು.

ತನಿಖಾಧಿಕಾರಿ ಮಂಜುನಾಥ್ ಗೌಡ 15 ವಾಲ್ಯೂಮ್ಸ್ (ಸಂಪುಟ) ಹೊಂದಿದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಎಫ್‌ಎಸ್‌ಎಲ್‌ನಲ್ಲಿ ಆರೋಪಿಯ ಕೃತ್ಯ ಹೋಲಿಕೆ ಆಗುತ್ತಿದೆ. ಕೃತ್ಯಕ್ಕೆ ಬಳಸಿದ ಚಾಕು, ರಕ್ತಸಿಕ್ಕ ಬಟ್ಟೆಗಳು ಪೊಲೀಸರಿಗೆ ಸಿಕ್ಕಿರುವ ಪ್ರಮುಖ ಸಾಕ್ಷಿಗಳಾಗಿವೆ. ಸ್ಥಳೀಯ ಠಾಣೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ಪುಟಗಳ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಮುಂದೇನು?
ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ. ನ್ಯಾಯಾಧೀಶರ ಬಳಿಗೆ ದೋಷಾರೋಪಣೆ ಪಟ್ಟಿ ರವಾನೆಯಾದ ಬಳಿಕ ನ್ಯಾಯಾಲಯವು ವಿಚಾರಣೆ ನಡೆಸಲಿದೆ. ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸುತ್ತದೆ. ಜಿಲ್ಲಾ ಸತ್ರ ನ್ಯಾಯಾಲಯ ಪ್ರಕರಣಕ್ಕೆ ಸೆಷನ್ಸ್ ಕೇಸ್ (ಎಸ್‌ಸಿ) ನಂಬರ್ ನೀಡಲಿದೆ. ಹೆಚ್.ಬಿ.ಸಿ ಚಾರ್ಜ್‌ ಫ್ರೇಮ್ ಆಗಲಿದ್ದು ಆರೋಪಿ ತಪ್ಪು ಒಪ್ಪಿದರೆ ಶಿಕ್ಷೆ ಆಗಲಿದೆ. ತಪ್ಪು ಒಪ್ಪದೇ ಇದ್ದಲ್ಲಿ ವಿಚಾರಣೆ ಆರಂಭವಾಗಲಿದೆ.

ನೂರ್ ಮಹಮ್ಮದ್ ಕುಟುಂಬಸ್ಥರ ಒತ್ತಾಯದಂತೆ ಸರ್ಕಾರ ವಿಶೇಷ ಅಭಿಯೋಜಕರನ್ನು ನೇಮಿಸಿದೆ. ಫಾಸ್ಟ್ ಕೋರ್ಟ್ ನಲ್ಲಿ ಆರೋಪಿಯ ವಿಚಾರಣೆ ನಡೆಯಬೇಕು ಎಂಬ ಒತ್ತಾಯವೂ ಇದೆ. ವಿಚಾರಣೆ ಆರಂಭವಾದ ನಂತರ ಮಂಗಳೂರು ಅಥವಾ ಉಡುಪಿಯ ಜೈಲಿನಲ್ಲಿ ವಿಶೇಷ ಭದ್ರತೆ ವ್ಯವಸ್ಥೆ ಮಾಡಿ ಆರೋಪಿಯನ್ನು ಬೆಂಗಳೂರಿನಿಂದ ಕರೆತರುವ ಸಾಧ್ಯತೆ ಇದೆ.

 

Loading

Leave a Reply

Your email address will not be published. Required fields are marked *