ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಶಾ ಮೊಹಮ್ಮದ್ ಖುರೇಷಿಗೆ ಪಾಕಿಸ್ತಾನ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸೈಫರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಬುವಲ್ ಹಸ್ನಾತ್ ಮುಹಮ್ಮದ್ ಜುಲ್ಕರ್ನೈನ್ ಅವರು ಮಂಗಳವಾರ ಈ ಆದೇಶವನ್ನು ನೀಡಿದ್ದಾರೆ ಎಂದು ಇಮ್ರಾನ್ ಖಾನ್ ಅವರ ವಕೀಲ ಶೋಯೆಬ್ ಶಾಹೀನ್ ಅವರು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಜೊತೆಗೆ ಮಾಜಿ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಕೂಡ ಇದೇ ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆ ಅನುಭವಿಸಲಿದ್ದಾರೆ ಎಂದಿದ್ದಾರೆ. ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಕಳೆದ ತಿಂಗಳು ಅಡಿಯಾಲಾ ಜಿಲ್ಲಾ ಜೈಲಿನಲ್ಲಿ ಸೈಫರ್ ಪ್ರಕರಣದ ಹೊಸ ವಿಚಾರಣೆಯನ್ನು ಪ್ರಾರಂಭಿಸಿತ್ತು.
ಡಿಸೆಂಬರ್ 13 ರಂದು ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಶಾ ಮೆಹಮೂದ್ ಖುರೇಷಿ ಎರಡನೇ ಬಾರಿಗೆ ಶಿಕ್ಷೆಗೊಳಗಾಗಿದ್ದರು. ಪ್ರಸ್ತುತ ಜೈಲಿನಲ್ಲಿರುವ ಇಮ್ರಾನ್ ಖಾನ್ ಮತ್ತು ಮೊಹಮ್ಮದ್ ಖುರೇಷಿ ಅಕ್ಟೋಬರ್ನಲ್ಲಿ ಈ ಪ್ರಕರಣದಲ್ಲಿ ಪ್ರಾಥಮಿಕ ಆರೋಪಗಳನ್ನು ಎದುರಿಸಿದ್ದರು. ಅಲ್ಲದೇ ಆಗ ತಾವು ನಿರಪರಾಧಿ ಎಂದು ಘೋಷಿಸಿಕೊಂಡಿದ್ದರು.