ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೆ ಸಮನ್ಸ್ ಜಾರಿ ಮಾಡಿದೆ. ಕಳೆದ ತಿಂಗಳು ಕ್ರಿಕೆಟ್ ಸಂಸ್ಥೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿತ್ತು. ಅನಾರೋಗ್ಯದ ಕಾರಣದಿಂದಾಗಿ ಶ್ರೀನಗರದಲ್ಲಿರುವ ಏಜೆನ್ಸಿಯ ಕಚೇರಿಗೆ ಹಾಜರಾಗಿರಲಿಲ್ಲ.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಳಿಕ ಇದೀಗ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.
ಜಮ್ಮು-ಕಾಶ್ಮೀರದ ಕ್ರಿಕೆಟ್ ಅಸೋಶಿಯೇಷನ್ (JKCA) ಸಂಸ್ಥೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎನ್ನುವ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಈ ಸಂಸ್ಥೆಯ ಹಣವನ್ನು ಸಂಘದ ಪದಾಧಿಕಾರಿಗಳು ಸೇರಿದಂತೆ ಕೆಲವೊಬ್ಬರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಹೀಗಾಗಿ ಇದೀಗ ಇಡಿ 2ನೇ ಸಮನ್ಸ್ ಅನ್ನು ಮಾಜಿ ಸಿಎಂಗೆ ಜಾರಿ ಮಾಡಿದೆ ಎಂದು ಹೇಳಲಾಗಿದೆ.