ಶ್ರೀನಗರ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಿಂದ ನಾಪತ್ತೆಯಾಗಿದ್ದ ಭಾರತೀಯ ಸೇನಾ ಯೋಧನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಿಗೂಢವಾಗಿ ನಾಪತ್ತೆಯಾಗಿ ಸುಮಾರು ಒಂದು ವಾರದ ಬಳಿಕ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ. ನಾಪತ್ತೆಯಾಗಿದ್ದ ಸೇನಾ ಯೋಧನನ್ನು ಕುಲ್ಗಾಮ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಜಂಟಿ ವಿಚಾರಣೆ ಆರಂಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಧನ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ಈ ಹಿಂದೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೂ ಅವರನ್ನು ಭಯೋತ್ಪಾದಕರು ಅಪಹರಿಸಿರಬಹುದು ಎಂಬ ಆತಂಕವಿತ್ತು. ಆದರೆ ಯಾವುದೇ ಉಗ್ರಗಾಮಿ ಸಂಘಟನೆಗಳು ಅವರ ಅಪಹರಣದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಜವಾನರನ್ನು ಅಪಹರಿಸಿದ ಪ್ರಕರಣಗಳು ಹಲವಾರು ಬಾರಿ ಸಂಭವಿಸಿವೆ. ಇದೇ ಕಾರಣಕ್ಕೆ ಅವರನ್ನು ಉಗ್ರರು ಅಪಹರಿಸಿದ್ದ ಶಂಕೆ ವ್ಯಕ್ತವಾಗಿತ್ತು. ಯೋಧನ ಹುಡುಕಾಟ ನಡೆಸುವಂತೆ ಈ ಹಿಂದೆ ಆತನ ಕುಟುಂಬ ಕೇಂದ್ರಕ್ಕೆ ಮನವಿ ಮಾಡಿತ್ತು.
ಲಡಾಖ್ನಲ್ಲಿ ನಿಯೋಜನೆಗೊಂಡಿದ್ದ ಜಾವೆದ್ ಅಹ್ಮದ್ ವಾನಿ (25) ಅವರು ರಜೆ ಮೇಲೆ ಮನೆಗೆ ತೆರಳಿದ್ದರು. ಈ ವೇಳೆ ಅವರು ಕಳೆದ ಜು.29ರ ಸಂಜೆ ಮನೆಯಿಂದ ಅಂಗಡಿಯೊಂದಕ್ಕೆ ತೆರಳಿದ್ದರು. ಬಳಿಕ ನಿಗೂಢವಾಗಿ ಕುಲ್ಗಾಮ್ನಿಂದ ಅವರು ನಾಪತ್ತೆಯಾಗಿದ್ದರು. ಅಲ್ಲದೇ ಕಾರಿನಲ್ಲಿ ಅವರ ಚಪ್ಪಲಿ ಹಾಗೂ ರಕ್ತದ ಕಲೆಗಳು ಪತ್ತೆಯಾಗಿತ್ತು ಇದರಿಂದ ಇನ್ನೂ ಆತಂಕ ಹೆಚ್ಚಾಗಿತ್ತು. ಅಲ್ಲದೇ ಅವರನ್ನು ಉಗ್ರಗಾಮಿಗಳು ಅಪಹರಿಸಿರಬಹುದು ಎಂದು ಶಂಕಿಸಲಾಗಿತ್ತು.