ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏಕೆ ಬರ್ತಾರೆ ಅನ್ನೋದೇ ಅವರ ಪಕ್ಷದ ಅಯೋಗ್ಯರಿಗೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರನ್ನು ಅಯೋಗ್ಯರಿಗೆ ಹೋಲಿಕೆ ಮಾಡಿದ್ದಾರೆ.
ರಾಜ್ಯ ಬಿಜೆಪಿಯವರು ಮೊದಲು ನರೇಂದ್ರ ಮೋದಿ ಅವರು ಯಾಕೆ ಬರ್ತಾರೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕುಟುಕಿದ್ದಾರೆ.
ಸದ್ಯ ಬಿಜೆಪಿಯವರಿಗೆ ನಾನು ಮನೆ ದೇವರು ಆಗಿಬಿಟ್ಟಿದ್ದೇನೆ. ನನ್ನ ಬಗ್ಗೆ ಮಾತನಾಡುವ ತನಕ ಅವರಿಗೆ ತಿಂದ ಅನ್ನ ಕರಗುವುದಿಲ್ಲ. ನಾನು ಬಿಜೆಪಿ ನಾಯಕರ ಅಯೋಗ್ಯ ಪದದ ಬಳಕೆ ರೆಕಾರ್ಡ್ ಆಗಿದೆಯಾ? ಆ ಪದದ ಸಮಾನಾರ್ಥಕ ಪದ ಯಾವುದು ಇದೆಯೋ ಅದೆಲ್ಲವನ್ನೂ ಬಳಸಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಯಾತ್ರೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ. ಎಲ್ಲಾ ವಿರೋಧ ಪಕ್ಷಗಳಿಗೆ ಮಾದರಿ. ದೇಶದ ಐಕ್ಯತೆ, ಸಮಗ್ರತೆ ಶಾಂತಿಗೆ ಸಾವಿರಾರು ಕಾಂಗ್ರೆಸ್ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ತನ್ನ ಅಜ್ಜಿಗೆ ಗುಂಡು ಹಾರಿಸಿ ಕೊಂದಿದ್ದನ್ನು, ಅವರ ಚಿಕ್ಕಪ್ಪ ಸಂಜಯ್ ಗಾಂಧಿ ಹತ್ಯೆಯನ್ನು, ತನ್ನ ತಂದೆ ರಾಜೀವ್ ಗಾಂಧಿ ಮೇಲೆ ಬಾಂಬ್ ದಾಳಿ ಮಾಡಿ, ಹತ್ಯೆ ಮಾಡಿದ್ದನ್ನು ರಾಹುಲ್ ಗಾಂಧಿ ಚಿಕ್ಕ ವಯಸ್ಸಿನಲ್ಲೇ ಕಂಡಿದ್ದಾರೆ. ಇಷ್ಟು ದುಃಖ ಅನುಭವಿಸಿದ್ದರೂ ಅವರು ದೇಶದ ಒಗ್ಗಟ್ಟಿಗಾಗಿ ಯಾತ್ರೆ ಮಾಡುತ್ತಿದ್ದಾರೆ. ಅದನ್ನು ನೋಡಿ ಬಿಜೆಪಿಯವರಿಂದ ಸಹಿಸಲು ಆಗುತ್ತಿಲ್ಲ. ಬಿಜೆಪಿಯ ಯಾವುದಾದರೂ ಒಬ್ಬ ನಾಯಕ ಇಂತಹ ತ್ಯಾಗ ಮಾಡಿದ್ದಾರಾ? ಕಾಂಗ್ರೆಸ್ ಪಕ್ಷ ಮಾತ್ರ ಇಂತಹ ಯಾತ್ರೆ ಮಾಡಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು