ಬಳ್ಳಾರಿ:-ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ ಜನಪ್ರತಿನಿಧಿಗಳೆ ಸುಮ್ಮನೆ ಕುಳಿತರೆ ಅಭಿವೃದ್ಧಿ ಕಾರ್ಯಗಳು ತಾನೇ ಹೇಗೆ ನಡೆಯಲು ಸಾಧ್ಯ. ಅದರಲ್ಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳೆಂದರೇ ಯಾಕೆ ಈ ಅಸಡ್ಯೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿರುವ ಡಾ!ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು, ರೈತರು, ದಲಿತರ ಮಕ್ಕಳು ಓದುತ್ತಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಶಾಲೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.
ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಇದ್ದರು ವಿಧ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗಾಗಲೇ ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಈ ಭಾಗವನ್ನು ಅಭಿವೃದ್ದಿ ಪಡಿಸುವ ಸಲುವಾಗಿ 371(ಜೆ)ಯನ್ನು ಜಾರಿಗೊಳ್ಳಿಸಲಾಗಿದೆ. ಎಪಿಎಂಸಿ ಕಟ್ಟಡದಲ್ಲಿ ಅನಧಿಕೃತವಾಗಿ 7 ವರ್ಷಗಳಿಂದ ತರಗತಿ ನಡೆಸಿಕೊಂಡು ಸಿಬ್ಬಂದಿಗಳು ಬಂದಿದ್ದಾರೆ.
ಬಾಲಕರು – 140, ಬಾಲಕೀಯರು -90, ಒಟ್ಟು 230 ವಿಧ್ಯಾರ್ಥಿಗಳನ್ನು ಹೊಂದಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸುಮಾರು 230 ಮಕ್ಕಳಿಗೆ ಕೇವಲ 3 ಶೌಚಾಲಯಗಳು ಮಾತ್ರ ಇವೆ. ನಾಮಕಾವಸ್ಥೆಗೆ ಮಾತ್ರ ಶೌಚಾಲಯ ಇದ್ದು, ಹೊರಗಡೆ ಬಯಲು ಪ್ರದೇಶವೇ ಮಕ್ಕಳಿಗೆ ಶೌಚಾಲಯವಾಗಿದೆ.
ಮುಖ ತೊಳೆಯಲು, ಸ್ನಾನ ಮಾಡಲು, ಬಟ್ಟೆತೊಳೆಯಲು ಕೇವಲ ಎರಡೇ ಎರಡು ಕೊಳಾಯಿ(ನಲ್ಲಿ) ಮಾತ್ರ, ಭತ್ತದ ರಾಶಿಗಳ ನಡುವೆ ವಿಧ್ಯಾಭ್ಯಾಸ ಮಾಡಲಾಗುತ್ತಿದೆ. ಭತ್ತದ ರಾಶಿಗಳಿಂದ ಬರುವ ಧೂಳು, ಕಸ, ಜನಜಂಗೂಳಿಯ ನಡುವೆ ಊಟ,ಆಟ,ಪಾಟದ ಕಲಿಕೆ,. ಆಟವಾಡಲು ಕ್ರೀಡಾಂಗಣ ವ್ಯವಸ್ಥೆಯಿಲ್ಲ, ಸುತ್ತಲು ನಿರಂತರ ದನಕರಗಳ ಒಡಾಟ, ಸ್ವಚ್ಚತೆ ಸಂಪೂರ್ಣ ಮರೀಚಿಕೆ ಆಗಿದೆ.ಹೀಗಾಗಿ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.