ಕೆಂಗೇರಿ: ವೈದ್ಯಕೀಯ ಕ್ಷೇತ್ರ ಸೇವಾ ವಲಯದ ಹಿರಿಮೆ ಕಳೆದುಕೊಂಡು ಔದ್ಯಮಿಕ ಕ್ಷೇತ್ರವಾಗುತ್ತಿದೆ ಎಂದು ನಾಡೋಜ ಹಾಗೂ ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಬೇಸರ ವ್ಯಕ್ತ ಪಡಿಸಿದರು. ಕೆಂಗೇರಿ ಬಳಿಯ ಎಸ್ ಜೆ ಬಿ ಐ ಟಿ ಮತ್ತು ಎಸ್ ಜೆ ಪಿ ಸ್ಯಾಪ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶೇ.50ರಷ್ಟು ಕಾಯಿಲೆಗಳನ್ನು ಕೇವಲ ಮಾನಸಿಕ ಸ್ಥೈರ್ಯ, ಜೀವನ ಶೈಲಿಯಿಂದ ವಾಸಿ ಮಾಡಿಕೊಳ್ಳಲು ಸಾಧ್ಯವಿದೆ. ಹಣ ಗಳಿಕೆಯ ದಾವಂತದಲ್ಲಿ ಔಷಧಿಗಳನ್ನು ನೀಡಿ ಜನರ ಆರೋಗ್ಯದ ಹೆಸರಿನಲ್ಲಿ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಏರೋಸ್ಪೇಸ್ ಮತ್ತು ವಾಯುಯಾನ ಕೌಶಲ್ಯ ಮಂಡಲಿ ನಿರ್ದೇಶಕ ಡಾ.ಜಿ.ಶ್ರೀಕಾಂತ ಶರ್ಮಾ ಮಾತನಾಡಿ, . ಶೈಕ್ಷಣಿಕ ಜ್ಞಾನದೊಂದಿಗೆ ಕಾಲ ಕಾಲಿಕ ಪ್ರಾಪಂಚಿಕ ವಿಷಯಗಳನ್ನು ಗ್ರಹಿಸುತ್ತಿರಬೇಕು. ಆಗ ಮಾತ್ರ ಬದಲಾಗುತ್ತಿರುವ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಛಾಪು ಮೂಡಿಸಲು ಸಾಧ್ಯ ಎಂದರು. ಹಲವಾರು ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶ ನೀಡುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ಮಾಡಬೇಕು ಎಂದು ಹೇಳಿದರು. ಬೆಳಕಿನಿಡೆ ಸಾಗಲು ಜ್ಞಾನವೇ ರಹದಾರಿ ಎಂದು ತಿಳಿಸಿದರು.
ಆದಿ ಮುಂ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಜವಾಬ್ದಾರಿಯಿದ್ದಂತೆ. ದೊರೆತಿರುವ ಸ್ವಾತಂತ್ರ್ಯ ವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದುರ್ಬಳಕೆಯಿಂದ ಆಗಬಹುದಾದ ದುಷ್ಪರಿಣಾಮವನ್ನು ಅವರೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾತು ಅತ್ಯಂತ ಬಲಿಷ್ಟ ಸಂವಹನ ಮಾಧ್ಯಮ. ನಾವು ಆಡುವ ಮಾತು ಸೃಷ್ಡಿಸಬಹುದಾದ ಅಪಾಯ ಹಾಗೂ ಕೆಟ್ಟ ಪರಿಣಾಮಗಳನ್ನು ಅರಿತು ಮಿತವಾಗಿ ಸಮಯೋಚಿತವಾಗಿ ಮಾತನಾಡಬೇಕು ಎಂದು ಹೇಳಿದರು.ಎಸ್ ಜೆ ಬಿ ಐಟಿ ಪ್ರಾಂಶುಪಾಲ ಡಾ.ಮಹೇಂದ್ರ ಪ್ರಶಾಂತ್, ಡಾ.ಪ್ರಕಾಶನಾಥ ಸ್ವಾಮೀಜಿ, ಎಸ್ ಜೆ ಬಿ ಸ್ಯಾಪ್ ಪ್ರಾಂಶುಪಾಲ ಡಾ.ಚಂದ್ರಶೇಖರ ನಟ ರಮೇಶ್ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.