ಸ್ಯಾಂಟಿಯಾಗೊ: ದಕ್ಷಿಣ ಅಮೆರಿಕದ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿಗೆ ಕನಿಷ್ಠ 51ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಧ್ಯ ಚಿಲಿಯ ಸುಮಾರು 10 ಲಕ್ಷ ನಿವಾಸಿಗಳು ವಾಸಿಸುವ ವಾಲ್ಪಾರೈಸೊ ಪ್ರದೇಶದ ಅನೇಕ ಭಾಗಗಳಲ್ಲಿ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿ ನಂದಿಸಲು ಹೆಣಗಾಡುತ್ತಿದ್ದಾರೆ.
ಕರಾವಳಿಯ ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ ಮತ್ತು ರಕ್ಷಣಾ ತಂಡಗಳು ಎಲ್ಲಾ ಪೀಡಿತ ಪ್ರದೇಶಗಳನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ ಎಂದು ಚಿಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ದಶಕದಿಂದ ಚಿಲಿಯಲ್ಲಿ ಕಾಡ್ಗಿಚ್ಚಿನ ಪ್ರಮಾಣ ಏರಿಕೆಯಾಗುತ್ತಿದೆ. ದೇಶದ್ಯಾಂತ 92 ಕಡೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದ 43,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಿಗೆ ಹಾನಿಯಾಗಿದೆ.
ಬೇಸಿಗೆ ತಿಂಗಳಿನಲ್ಲಿ ಚಿಲಿಯಲ್ಲಿ ಕಾಡ್ಗಿಚ್ಚು ಸಾಮಾನ್ಯ. ಕಳೆದ ವರ್ಷ ಸುಮಾರು 27 ಜನರು ಸಾವನ್ನಪ್ಪಿದ್ದರೆ 4,00,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶಕ್ಕೆ ಹಾನಿಯಾಗಿತ್ತು. ಅರಣ್ಯ ಪ್ರದೇಶದ ಬಳಿ ಜನ ವಸತಿ ಬಹಳ ಬೇಗ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾವು ನೋವುಗಳ ಸಂಖ್ಯೆ ಏರಿಕೆಯಾಗುತ್ತಿದೆ.