ವಾಹನ ಖರೀದಿ ಸಮಯದಲ್ಲೇ ಸುಮಾರು ₹5 ಲಕ್ಷದ ವಾಹನಕ್ಕೆ ₹65,000 ರಸ್ತೆ ತೆರಿಗೆಯೆಂದು ಕಟ್ಟಲಾಗಿರುತ್ತದೆ. ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ ಸೆಸ್ ಕಟ್ಟಲಾಗುತ್ತದೆ. ನಗರದ ಕುಮಾರ್ ಪಾರ್ಕ್ ಬಳಿಯ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಉಪಾಧ್ಯಕ್ಷ ಮೋಹನ್ ದಾಸರಿ ಅವರು, ಇಷ್ಟೆಲ್ಲಾ ಕಟ್ಟಿದ ನಂತರ ಪುನಃ ಟೋಲ್ ರೂಪದಲ್ಲಿ ಸುಂಕ ಕಟ್ಟಬೇಕಿದೆ. ರಸ್ತೆಗಳಾದರೂ ಸುಧಾರಣೆಗೊಂಡಿವೆಯೇ? ರಸ್ತೆಗುಂಡಿಗಳು, ಅವೈಜ್ಞಾನಿಕ ಚರಂಡಿಗಳು, ಸರ್ವಿಸ್ ರಸ್ತೆಗಳೇ ಇಲ್ಲದಿರುವುದು ಹೀಗೆ ನೂರಾರು ಸಮಸ್ಯೆಗಳು ರಸ್ತೆಯುದ್ದಕ್ಕೂ ಬಿದ್ದಿವೆ. ಹಾಗಿದ್ದರೆ ಸುಂಕವೆಂದು ಸಂಗ್ರಹಿಸಲಾಗುತ್ತಿರುವ ಈ ದುಡ್ಡೆಲ್ಲ ಎಲ್ಲಿ ಹೋಗುತ್ತಿದೆ? ಬೆಂಗಳೂರು-ಮುಂಬೈ ಹೆದ್ದಾರಿಯಲ್ಲಿ ಅನಧಿಕೃತವಾಗಿ ₹76 ಕೋಟಿ ಸಂಗ್ರಹಿಸಲಾಗಿದೆ ಎಂದು ಸಿಎಜಿ ವರದಿ ಕೊಟ್ಟಿದೆ.
ದ್ವಾರಕಾ ಎಕ್ಸ್ಪ್ರೆಸ್ ವೇ ಕುರಿತಾದ ಸಿಎಜಿ ವರದಿಯಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ ನಿಗದಿಪಡಿಸಲಾಗಿದ್ದ ₹18 ಕೋಟಿ ಬದಲಿಗೆ ₹250 ಕೋಟಿ ವ್ಯಯಿಸಲಾಗಿದೆ ಎಂದಿದೆ. ಇವೆಲ್ಲವನ್ನೂ ಗಮನಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾರಿ ಪ್ರಮಾಣದ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದು ದಾಸರಿ ಆಪಾದಿಸಿದರು. ಈ ವೇಳೆ ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಡಾ.ಸತೀಶ್ ಕುಮಾರ್ ಹಾಗೂ ಹಿರಿಯ ಮುಖಂಡ ಗುರುಮೂರ್ತಿ ಉಪಸ್ಥಿತರಿದ್ದರು.