TCSನಲ್ಲಿ ಮಹಿಳಾ ಉದ್ಯೋಗಿಗಳಿಂದ ಸಾಮೂಹಿಕ ರಾಜೀನಾಮೆ

ಭಾರತದ ಅತೀ ದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (TCS) ಕಂಪನಿ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಜಗತ್ತಿನಾದ್ಯಂತ ಕೋವಿಡ್‌ 19 ಸೋಂಕು ತಲೆದೋರಿದ ಮೂರು ವರ್ಷಗಳ ಬಳಿಕ ಟಿಸಿಎಸ್‌ ವರ್ಕ್‌ ಫ್ರಂ ಹೋಮ್‌ ಅನ್ನು ರದ್ದುಗೊಳಿಸಿದ್ದು, ಇದರ ಪರಿಣಾಮ ಮಹಿಳಾ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿರುವ ಘಟನೆ ಹೆಚ್ಚಳವಾಗಿದೆ.

 

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಯಾವುದೇ ಲಿಂಗತಾರತಮ್ಯವಿಲ್ಲದೇ ಕಂಪನಿಯಲ್ಲಿ ಮಹಿಳೆಯರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಏತನ್ಮಧ್ಯೆ ವರ್ಕ್‌ ಫ್ರಂ ಹೋಮ್‌ (WFH) ನಿಯಮವನ್ನು ರದ್ದುಗೊಳಿಸಿದ್ದರಿಂದ ಮಹಿಳಾ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ರಾಜೀನಾಮೆ ಕೊಡಲು ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ.

ಟಿಸಿಎಸ್‌ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್‌ ಲಕ್ಕಡ್‌ ಅವರ ಮಾಹಿತಿ ಪ್ರಕಾರ, ವರ್ಕ್‌ ಫ್ರಂ ಹೋಮ್‌ ಅವಕಾಶವನ್ನು ನಿಲ್ಲಿಸಿದ ನಂತರ ಮಹಿಳಾ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಟಿಸಿಎಸ್‌ ನಲ್ಲಿ ರಾಜೀನಾಮೆ ವಿಚಾರದಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚು, ಆದರೆ ಇದೀಗ ಪುರುಷರನ್ನು ಮೀರಿ ಮಹಿಳೆಯರೇ ಅತ್ಯಧಿಕ ಸಂಖ್ಯೆಯಲ್ಲಿ ಕಂಪನಿಗೆ ರಾಜೀನಾಮೆ ನೀಡಿರುವುದಾಗಿ ಮಿಲಿಂದ್‌ ವಿವರಿಸಿದ್ದಾರೆ.

ಟಿಸಿಎಸ್‌ ನಲ್ಲಿ 6,00,000 ಲಕ್ಷಕ್ಕೂ ಅಧಿಕ ಜನರು ಉದ್ಯೋಗಿಗಳಿದ್ದಾರೆ. ಇದರಲ್ಲಿ ಶೇ.35ರಷ್ಟು ಮಹಿಳೆಯರು. 2023ರ ಆರ್ಥಿಕ ವರ್ಷದಲ್ಲಿ ಕಂಪನಿಯಲ್ಲಿ ಶೇ.38ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಇದರಲ್ಲಿ ಶೇ.3ರಷ್ಟು ಉನ್ನತ ಹುದ್ದೆಯಲ್ಲಿದ್ದಾರೆ. ಕಳೆದ ವರ್ಷ ಟಿಸಿಎಸ್ ಶೇ.20ರಷ್ಟು ಮಹಿಳಾ ಉದ್ಯೋಗಿಗಳನ್ನು ಕಳೆದುಕೊಂಡಿದೆ ಎಂದು ವಿವರಿಸಿದೆ.

Loading

Leave a Reply

Your email address will not be published. Required fields are marked *