ತಮಿಳು ಚಿತ್ರರಂಗಕ್ಕೆ ಕಹಿ ಸುದ್ದಿ ಕೇಳಿಬಂದಿದೆ. ಕಾಲಿವುಡ್ನಲ್ಲಿ ಫೇಮಸ್ ಆಗಿದ್ದ ಹಿರಿಯ ನಟ, ನಿರ್ದೇಶಕ ಮನೋಬಾಲ (Manobala) ಅವರು ಇಹಲೋಕ ತ್ಯಹಿಸಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಕೆಲವು ತಿಂಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಲಿವರ್ ಸಂಬಂಧಿತ ಸಮಸ್ಯೆಯಿಂದ (Liver Problem) ಬಳಲುತ್ತಿದ್ದ ಮನೋಬಾಲ ಅವರು ಇಂದು (ಮೇ 3) ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನಕ್ಕೆ (Manobala Death) ತಮಿಳು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ಮನೋಬಾಲ ಅವರು ಸಕ್ರಿಯರಾಗಿದ್ದರು. ಈ ಸುದೀರ್ಘ ಪಯಣದಲ್ಲಿ ಅವರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡು ಕಾಲಿವುಡ್ ಬಡವಾಗಿದೆ. ಅಭಿಮಾನಿಗಳ ಜೊತೆಯಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಮನೋಬಾಲ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.