ಮಂಡ್ಯ: ಜೂನ್ 3ನೇ ವಾರಕ್ಕೆ ಬಂದರೂ ಸಹ ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮಳೆಯಾಗಿಲ್ಲ. ಇದರ ಪರಿಣಾಮ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ 80 ಅಡಿಗೆ ಕುಸಿದಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ ಕಾವೇರಿ ನೀರನ್ನು ಅವಲಂಬಿಸಿರುವ ಜನರು ಕುಡಿಯುವ ನೀರಿಗೂ ಸಮಸ್ಯೆ ಎದುರಿಸಬೇಕಾದ ದಿನಗಳು ಬರಲಿವೆ.
ಈಗಾಗಲೇ ಡ್ಯಾಂನ ಗೇಟ್ನ ಬಳಿ ನೀರಿಲ್ಲ. ಇಂತಹ ಪರಿಸ್ಥಿತಿ ಬಂದರೆ ಇರುವ ನೀರನ್ನು ಬಳಕೆ ಮಾಡಿಕೊಳ್ಳಲು, ಮುನ್ನೆಚ್ಚರಿಕೆಯಾಗಿ ಡ್ಯಾಂ ನಿರ್ಮಾಣದ ವೇಳೆಯೇ ಮಾಡಿರುವ ಒಳಭಾಗದ ನಾಲೆಯಿಂದ ಈಗ ಕುಡಿಯಲು ನೀರು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ ಈ ನಾಲೆಯಿಂದಲೂ ನೀರು ಬಿಡಲು ಸಾಧ್ಯವಿಲ್ಲ.
ಈಗ ಡ್ಯಾಂನಲ್ಲಿ 10.811 ಟಿಎಂಸಿ ನೀರಿದೆ. ಈ ಪೈಕಿ 3.811 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಇದನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬರುವ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಭಾಗದ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ.