ತಿರುವನಂತಪುರಂ: ಮಲಯಾಳಂ ನಟಿ ದಿವ್ಯಾ ಪ್ರಭಾ (Divya Prabha) ಅವರಿಗೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ಅಕ್ಟೋಬರ್ 9ರಂದು ಏರ್ ಇಂಡಿಯಾ ವಿಮಾನದಲ್ಲಿ (Air India) ನಟಿಯು ಮುಂಬೈನಿಂದ ಕೊಚ್ಚಿಗೆ ಆಗಮಿಸುತ್ತಿದ್ದರು. ಇದೇ ವೇಳೆ ಸಹ ಪ್ರಯಾಣಿಕನು ಕಿರುಕುಳ ನೀಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೆಯೇ, ಇನ್ಸ್ಟಾಗ್ರಾಂನಲ್ಲಿ ಘಟನೆಯನ್ನು ವಿವರಿಸಿ ಪೋಸ್ಟ್ ಹಾಕಿದ್ದಾರೆ.
“ಏರ್ ಇಂಡಿಯಾ ವಿಮಾನದಲ್ಲಿ ಕಹಿ ಘಟನೆಯೊಂದು ನಡೆದಿದೆ. ಕಿಟಕಿ ಪಕ್ಕ ಕುಳಿತ ನನ್ನ ಬಳಿ ಬಂದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಜತೆ ವಾದ ಮಾಡುವ ಜತೆಗೆ ಮೈಮುಟ್ಟಲು ಬಂದಿದ್ದಾನೆ. ಗಗನಸಖಿಯರಿಗೆ ಈ ವಿಷಯ ತಿಳಿಸಿದ ಬಳಿಕ ನನಗೆ ಬೇರೆ ಆಸನ ನೀಡಲಾಯಿತು. ವಿಮಾನದ ಸಿಬ್ಬಂದಿಗೆ ದೂರು ನೀಡಿದರೂ ಇದುವರೆಗೆ ಕಿರುಕುಳ ಮಾಡಿದವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ, ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ” ಎಂದು ನಟಿ ತಿಳಿಸಿದ್ದಾರೆ.