ನವದೆಹಲಿ: ಭಾರತದ ರಾಜಕೀಯ ಈಗ ಐಪಿಎಲ್ನಂತಾಗಿದೆ, ಯಾರು ಯಾವ ಕಡೆಯಿಂದ ಆಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಮಾಧ್ಯಮಗಳನ್ನು ಉದ್ದೇಶಿಸಿ, ‘ ದೇಶ ಮತ್ತು ಮಹಾರಾಷ್ಟ್ರದಲ್ಲಿ ರಾಜಕೀಯ ಮಟ್ಟವು ಕೆಳಮಟ್ಟಕ್ಕೆ ತಲುಪಿದೆ. ಜನರು ಅಸಮಾಧಾನಗೊಂಡಿದ್ದಾರೆ. ಸರ್ಕಾರವು ಇನ್ನೂ ಸಾರ್ವಜನಿಕರ ಬಗ್ಗೆ ತಲೆಕೆಡಿಸಿಕೊಂಡಂತೆ ತೋರುತ್ತಿಲ್ಲ’ ಎಂದರು. ‘ನಿಮ್ಮ ಮನೆ ಬಾಗಿಲಿಗೆ ಸರ್ಕಾರ’ಕಾರ್ಯಕ್ರಮಗಳಿವೆ, ಆದರೆ ಜನರ ಮನೆಗಳ ಸ್ಥಿತಿ ಏನು? ಸರ್ಕಾರ ಅದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚೆಗೆ, ಶರದ್ ಪವಾರ್ ನೇತೃತ್ವದ ಎನ್ಸಿಪಿಯ ವಿಭಜನೆಯ ನಂತರ ಅಜಿತ್ ಪವಾರ್ ಬಿಜೆಪಿ ಮತ್ತು ಶಿವಸೇನೆ ಒಕ್ಕೂಟ ಸೇರಿದ್ದು, ದೇವೇಂದ್ರ ಫಡ್ನವಿಸ್ ಅವರೊಂದಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಂಡಿದ್ದಾರೆ. ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಉದ್ಧವ್ ಠಾಕ್ರೆ, ಫಡ್ನವೀಸ್ ಅವರು ಎನ್ಸಿಪಿಯೊಂದಿಗೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ ಎನ್ನುತ್ತಾ ಹಳೆಯ ಆಡಿಯೋ ಕ್ಲಿಪ್ನ್ನು ಪ್ಲೇ ಮಾಡಿದರು. ಹೀಗಾಗಿ ಅವರ ತವರು ನೆಲವಾದ ನಾಗ್ಪುರಕ್ಕೆ ಫಡ್ನವೀಸ್ ಕಳಂಕ ಎಂದು ವಾಗ್ದಾಳಿ ನಡೆಸಿದರು.