ಬೆಂಗಳೂರು: ತಂದೆ ಭೇಟಿಗೆ ತೆರಳಿದ್ದ ಮದನಿ ನಿರಾಸೆಯಿಂದ ವಾಪಸ್ ಆಗಿದ್ದಾರೆ ಹೌದು 2008ರ ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಆರೋಪಿ ಅಬ್ದುಲ್ ನಾಸೀರ್ ಮದನಿ ತಂದೆ ಭೇಟಿಗೆ ತೆರಳಿ ವಾಪಸ್ ಆಗಿದ್ದಾನೆ. ಅನಾರೋಗ್ಯ ಪೀಡಿತ ತಂದೆ ನೋಡಲು ಕೇರಳಕ್ಕೆ ಹೋಗಿ ತಾನೇ ಅನಾರೋಗ್ಯಕ್ಕೀಡಾಗಿದ್ದಾನೆ.
ಸುಪ್ರೀಂ ಕೋರ್ಟ್ನಿಂದ ಪೆರೋಲ್ ಪಡೆದು ಜೂನ್ 26ರಂದು ಮದನಿ ಕೇರಳಕ್ಕೆ ತೆರಳಿದ್ದ. ಕೇರಳ ತಲುಪಿದ್ದ ಬಳಿಕ ಮದನಿಯ ಬಿಪಿ ಜಾಸ್ತಿಯಾಗಿ ಅಸ್ವಸ್ಥನಾಗಿದ್ದ. ನಂತರ ಕೇರಳ ಆಸ್ಪತ್ರೆಗೆ ದಾಖಲಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತಂದೆ ವಾಸವಿದ್ದ ಸುಮಾರು 30 ಕಿ.ಮೀ. ದೂರದ ಊರಿನಲ್ಲಿ ಮದನಿ ಆಸ್ಪತ್ರೆಗೆ ದಾಖಲಾಗಿದ್ದ.
ಜುಲೈ 7 ರವರೆಗೆ ಮದನಿ ಕೇರಳದಲ್ಲಿ ಇರಬೇಕಿತ್ತು. ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ತಂದೆಯನ್ನು ಮದನಿಗೆ ನೋಡಲು ಸಾಧ್ಯವಾಗಲಿಲ್ಲ. ಜುಲೈ ಏಳರವರೆಗೂ ಅಸ್ಪತ್ರೆಯಲ್ಲೇ ಇದ್ದ ಮದನಿಯ ಗಡುವು ಅಂತ್ಯವಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬೆಂಗಳೂರಿಗೆ ವಾಪಸ್ ಕರೆತರಲಾಗಿದೆ. 12 ದಿನದ ಸಿಬ್ಬಂದಿ ಖರ್ಚು ವೆಚ್ಚ ಹಾಗೂ ಸರ್ವೀಸ್ ಶುಲ್ಕಕ್ಕಾಗಿ 6,76,101 ರೂ. ಹಣವನ್ನು ಮದನಿ ಪಾವತಿಸಿದ್ದ.
ತಂದೆಯ ಅನಾರೋಗ್ಯದ ನಿಮಿತ್ತ ಕೇರಳಕ್ಕೆ ತೆರಳಲು ಅನುಮತಿ ನೀಡುವಂತೆ ಮದನಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದ. ಈ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಕೇರಳಕ್ಕೆ ತೆರಳಲು ಏಪ್ರಿಲ್ 17 ರಂದು ಅನುಮತಿ ನೀಡಿತ್ತು. ಸುಪ್ರೀಂ ಕೋರ್ಟ್ 3 ತಿಂಗಳ ಅನುಮತಿ ನೀಡಿದ್ದರೂ ಬೊಮ್ಮಾಯಿ ಸರ್ಕಾರ ಒಂದು ತಿಂಗಳಿಗೆ ಭದ್ರತಾ ವೆಚ್ಚವಾಗಿ 60 ಲಕ್ಷ ರೂ ಪಾವತಿಸಬೇಕೆಂದು ಷರತ್ತು ವಿಧಿಸಿತ್ತು.
ಈ ಶುಲ್ಕ ದುಬಾರಿಯಾಗಿದೆ. ಈ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಕೋರಿ ವಕೀಲ ಕಪಿಲ್ ಸಿಬಲ್ ಸುಪ್ರೀಂನಲ್ಲಿ ಮನವಿ ಮಾಡಿದ್ದರು. ಮದನಿ ತೆರಳುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಕೈಗೊಳ್ಳುವ ಸಲುವಾಗಿ ಕೇರಳ ಪೊಲೀಸರಿಗೆ ಕರ್ನಾಟಕ ಪೊಲೀಸರು ಮಾಹಿತಿ ರವಾನೆ ಮಾಡಿದ್ದರು.