ಬೆಂಗಳೂರು: ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಾಜಿ ಕಾರ್ಪೊರೇಟರ್ ಪದ್ಮರಾಜುರನ್ನು ಬಂಧಿಸಿಲಾಗಿದೆ. ನನಗೆ ಹಣ ಬೇಕು. ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇನೆ. ತಾಕತ್ತಿದ್ದರೆ ಬಾ ಮನೆ ಹತ್ತಿರ ಎಂದು ಆವಾಜ್ ಹಾಕಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪದ್ಮರಾಜ್ ಬಸವೇಶ್ವರನಗರ ಮಾಜಿ ಕಾರ್ಪೋರೇಟರ್ ಆಗಿದ್ದರು. ರಾತ್ರಿ 11.01ಕ್ಕೆ ಕರೆ ಮಾಡಿದ್ದ ಪದ್ಮರಾಜ್, ನನಗೆ ಹಣ ಬೇಕು, ಇಲ್ಲವಾದರೆ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದರಂತೆ. ಈ ಕರೆ ಬಂದ ಕೂಡಲೇ ಗೋಪಾಲಯ್ಯ ಅವರು ಸ್ಪೀಕರ್ ಹಾಗೂ ಗೃಹಸಚಿವರಿಗೆ ಫ್ಯಾಕ್ಸ್ ಮೂಲಕ ದೂರು ನೀಡಿದ್ದಾರೆ. ತಡರಾತ್ರಿಯೇ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.
ವಿಚಾರಣೆ ವೇಳೆ ಹಲವು ವಿಚಾರಗಳನ್ನು ಆರೋಪಿ ಬಾಯಿ ಬಿಟ್ಟಿದ್ದಾನೆ. ” ಶಾಸಕ ಗೋಪಾಲಯ್ಯ ಅವರಿಗೆ 15 ಲಕ್ಷ ರೂ. ಕೊಟ್ಟಿದ್ದೇನೆ. ಶಾಸಕ ಗೋಪಾಲಯ್ಯ ಅವರು ನನಗೆ (ಪದ್ಮರಾಜು) ಒಂದು ಟ್ರಸ್ಟ್ಗೆ 5 ಲಕ್ಷ ಹಣ ಹಾಕಲು ಹೇಳಿದರು. ಹೀಗಾಗಿ ಟ್ರಸ್ಟ್ ಖಾತೆಗೆ ಅಕೌಂಟ್ ಮೂಲಕ 5 ಲಕ್ಷ ರೂ. ವರ್ಗಾವಣೆ ಮಾಡಿದ್ದೇನೆ. ಕಾಮಗಾರಿ ಟೆಂಡರ್ ವಿಚಾರವಾಗಿ ಗೋಪಾಲಯ್ಯ ಅವರು ಸಚಿವರಾಗಿದ್ದಾಗ ನಗದು ರೂಪದಲ್ಲಿ 10 ಲಕ್ಷ ಹಣ ನೀಡಿದ್ದೇನೆ” ಎಂದು ಆರೋಪಿ ಪದ್ಮರಾಜು ಹೇಳಿದ್ದಾರೆ. ಈ ಹಣ ಕೇಳಲು ಮನೆ ಬಳಿಗೆ ಹೋಗಿದ್ದೆ, ಆದರೆ ಗೋಪಾಲಯ್ಯ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಕರೆ ಮಾಡಿದ್ದೆ. ಫೋನಲ್ಲಿ ಅವರೆ ಮೊದಲು ಅವಾಚ್ಯಪದದಿಂದ ಬೈದಿದ್ದರು. ಬಳಿಕ ನಾನು ಬೈದಿದ್ದೇನೆ ಎಂದು ಬಾಯಿಬಿಟ್ಟಿದ್ದಾರೆ.