ಬೆಂಗಳೂರು: ಧಮ್ಮು, ತಾಕತ್ ಇದ್ದರೆ, ಗ್ಯಾರಂಟಿ ಘೋಷಣೆಯ ಷರತ್ತುಗಳನ್ನು ತೆಗೆದು ಜಾರಿ ಮಾಡಲಿ, ಆಮೇಲೆ ಬಿಜೆಪಿಯ ತಾಕತ್ ಬಗ್ಗೆ ಪ್ರಶ್ನೆ ಮಾಡಲಿ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಕಾಂಗ್ರೆಸ್ ಘೋಷಣೆ ಜಾರಿ ಮಾಡದೇ ಇದ್ದರೆ ಕಾಂಗ್ರೆಸ್ ಮನೆಗೆ ಹೋಗೋದು ಖಚಿತ, ನೀವು ಘೋಷಣೆ ಮಾಡುವಾಗ ಕೇಂದ್ರ ಸರಕಾರ ಕೇಳಿ ಮಾಡಿದ್ರಾ?, ಡಿ.ಕೆ.
ಶಿವಕುಮಾರ್ ಅಣ್ಣ ನೀನು ಕೊಟ್ಟ ಭರವಸೆ ಉಳಿಸಿಕೊಳ್ಳಿ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತೊಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಡಿ ಎಂದಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಲು ಜನತೆ ನಿಮಗೆ ಮತ ಕೊಟ್ಟರೇ? ಎಂದ ಅವರು, ಕುಣಿಯಲು ಬರದವರು ನೆಲ ಡೊಂಕು ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ ಎಂದು ಆಕ್ಷೇಪಿಸಿದರು.
ಸಂಪೂರ್ಣ ಬಹುಮತ ಇದೆ; ನಾವು ಹೇಗಾದರೂ ಆಡಳಿತ ಮಾಡುತ್ತೇವೆ ಎಂಬ ಧೋರಣೆಯನ್ನು ಬಿಜೆಪಿ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಯಡಿಯೂರಪ್ಪನವರು ತಾವೊಬ್ಬರೇ ಜನಪ್ರತಿನಿಧಿ ಇದ್ದಾಗಲೂ ವಿಧಾನಸಭೆ ಒಳಗೆ ಮತ್ತು ಹೊರಗಡೆ ರಾಜ್ಯಾದ್ಯಂತ ಹೋರಾಟಗಳನ್ನು ಸಂಘಟಿಸಿದ್ದರು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂದು ರಾಜ್ಯದ ಜನರು ಮಾತನಾಡುತ್ತಿದ್ದರು ಎಂದು ಗಮನ ಸೆಳೆದರು.