ಇಂಫಾಲ್: ಹಿಂಸಾಪೀಡಿತ ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣ ಸಂಬಂಧ ಸರಣಿ ಭದ್ರತಾ ಸಭೆಗಳು ಹಾಗೂ ಕುಕಿ ಮತ್ತು ಮೈತೇಯಿ ಸಮುದಾಯಗಳ ಮುಖಂಡರ ನಡುವೆ ಸಂಧಾನ ಸಭೆಗಳನ್ನು ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಂಗೆಕೋರರಿಗೆ ಗುರುವಾರ ಖಡಕ್ ಎಚ್ಚರಿಕೆ ರವಾನಿಸಿದರು.
“ಶಾಂತಿ ಕದಡಲು ಪ್ರಯತ್ನಿಸಬೇಡಿ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸರಕಾರದ ಮುಂದೆ ಶರಣಾಗಿ. ಇಲ್ಲದೇ ಹೋದರೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ,” ಎಂದು ಗಲಭೆಕೋರರಿಗೆ ಎಚ್ಚರಿಕೆ ರವಾನಿಸಿದ ಸಚಿವರು, ದಂಗೆಕೋರರ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಲಿವೆ ಎಂದರು.
ಸರಣಿ ಸಭೆಗಳ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಅಮಿತ್ ಶಾ, “ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ, ಕಾನೂನು ಸುವ್ಯವಸ್ಥೆ ಪಾಲನೆ ಸರಕಾರದ ಪ್ರಮುಖ ಆದ್ಯತೆಯಾಗಿದೆ. ಜನಾಂಗೀಯ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸದ್ಯದಲ್ಲೇ ಸಮಿತಿ ರಚಿಸಲಾಗುವುದು. ಅಲ್ಲದೇ ರಾಜ್ಯಪಾಲರಾದ ಅನುಸೂಯ ಉಕಿ ಮತ್ತು ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಹಾಗೂ ನಾಗರಿಕರನ್ನು ಒಳಗೊಂಡ ಶಾಂತಿ ಪಾಲನಾ ಸಮಿತಿ ರಚಿಸಲಾಗುವುದು,” ಎಂದು ಹೇಳಿದರು.
6 ಕೇಸ್ ಸಿಬಿಐಗೆ
ಹಿಂಸಾಚಾರಕ್ಕೆ ಸಂಬಂಧಿಸಿದ 6 ಪ್ರಕರಣಗಳ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲಾಗುವುದು. ಶಾಂತಿಗೆ ಭಂಗದಂಥ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಶತಃಸಿದ್ಧ ಎಂದರು.
ಬಹುಸಂಖ್ಯಾತ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರಕಾರ ನಿರ್ಧಾರ ಕೈಗೊಂಡಿದ್ದನ್ನು ವಿರೋಧಿಸಿ ‘ಕುಕಿ’ ಸೇರಿದಂತೆ ಕೆಲ ಬುಡಕಟ್ಟು ಸಮುದಾಯಗಳ ಸದಸ್ಯರು ನಡೆಸಿದ ಪ್ರತಿಭಟನೆ ಹಿಂಸಾಚಾರ ತಿರುಗಿದ್ದರಿಂದ ಕಳೆದ ಕೆಲವು ದಿನಗಳಲ್ಲಿ ಮಣಿಪುರ ಹೊತ್ತಿ ಉರಿದಿತ್ತು. ಹಿಂಸಾಚಾರದಲ್ಲಿ 80ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಅಂದಾಜಿದೆ. ಈಗಾಗಲೇ ಕೇಂದ್ರ ಸರಕಾರವು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ಘೋಷಿಸಿದೆ.