ಕೊಳ್ಳೇಗಾಲ:- ಇಲ್ಲಿನ ಆದರ್ಶ ನಗರ ಬಡಾವಣೆಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರ ಆರು ವರ್ಷದ ಮಗಳು ನಾಪತ್ತೆಯಾಗಿರುವ ಘಟನೆ ಜರುಗಿದೆ. ಪಟ್ಟಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ರೇಖಾ, ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸವಿದ್ದರು. ಮಗಳನ್ನು ಲಿಂಗಣಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಳುಹಿಸುತ್ತಿದ್ದರು. ಎರಡು ದಿನಗಳಿಂದ ಬಾಲಕಿ ಶಾಲೆಗೆ ಬಂದಿಲ್ಲ ಎಂದು ಶಾಲೆಯ ಶಿಕ್ಷಕರು ಶನಿವಾರ ಮನೆಗೆ ಬಂದು ನೋಡಿದಾಗ ರೇಖಾಳ ಶವ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗಳು ಅಲ್ಲಿರಲಿಲ್ಲ. ತಕ್ಷಣ ಶಿಕ್ಷಕರು ಪೊಲೀಸರಿಗೆ ವಿಷಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹೂ, ಡಿವೈಎಸ್ಪಿ ಸೋಮೇಗೌಡ, ಶ್ವಾನದಳ ಹಾಗೂ ಬೆರಳು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇನ್ನೂ ಮಗಳ ಸಾವಿಗೆ ಸಂಬಂಧಿಸಿದಂತೆ ರೇಖಾ ತಂದೆ ನಾಗರಾಜು ಪೊಲೀಸರಿಗೆ ದೂರು ನೀಡಿದ್ದು, ಕೊಲೆ ಆರೋಪ ಮಾಡಿದ್ದಾರೆ.