ಶ್ರೀನಗರ: ಜಮ್ಮು ಕಾಶ್ಮೀರದ (Jammu And Kashmir) ಕುಪ್ವಾರದ (Kupwara) ಗಡಿ ನಿಯಂತ್ರಣಾ ರೇಖೆ ಬಳಿ ಒಳನುಸುಳುತ್ತಿದ್ದ (Infiltration) 5 ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಎಲ್ಒಸಿ (LOC) ಬಳಿಯ ಜುಮಗುಂಡ್ (Jumagund) ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಮುಂಜಾನೆ ವೇಳೆ 5 ಭಯೋತ್ಪಾದಕರನ್ನು ಹತ್ತಿಕ್ಕಲಾಗಿದೆ. 5 ವಿದೇಶಿ ಭಯೋತ್ಪಾದಕರನ್ನು ಎನ್ಕೌಂಟರ್ ಮಾಡಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಗಳು ಮುಂದುವರೆಯುತ್ತಿವೆ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ವಿಜಯ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಪೂಂಚ್ ಸೆಕ್ಟರ್ನಲ್ಲಿ ಭಯೋತ್ಪಾದಕರ ಒಳನುಸುಳುವಿಕೆಯನ್ನು ವಿಫಲಗೊಳಿಸಿದ ಭದ್ರತಾ ಪಡೆ, ಭಯೋತ್ಪಾದಕರಿಂದ ಬೃಹತ್ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡಿದೆ. ಫೆಬ್ರವರಿಯಿಂದ ಇಲ್ಲಿಯವರೆಗೆ ಒಟ್ಟು 10 ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.