ಶಿವಮೊಗ್ಗ: ಕದ್ದು ತಂದಿದ್ದ ಜೆಸಿಬಿ ಬಳಸಿ ಖತರ್ನಾಕ್ ಕಳ್ಳರು ಎಟಿಎಂ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ಈ ಘಟನೆ ಜರುಗಿದೆ. ರಾತ್ರೋರಾತ್ರಿ ಕಳ್ಳರು ಆಕ್ಸಿಕ್ ಬ್ಯಾಂಕ್ನ ಎಟಿಎಂ ಬಳಿಗೆ ಜೆಸಿಬಿ ತಂದಿದ್ದಾರೆ. ಜೆಸಿಬಿ ಮೂಲಕ ಎಟಿಎಂ ನಲ್ಲಿರುವ ಹಣ ಕಳ್ಳತನಕ್ಕೆ ಮುಂದಾಗಿದ್ದಾರೆ.
ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ. ಕುತೂಹಲಕಾರಿ ಘಟನೆ ಎಂದರೆ, ಎಟಿಎಂ ಕಳ್ಳತನಕ್ಕೆ ತಂದಿದ್ದ ಜೆಸಿಬಿಯನ್ನೂ ಸಹ ಕದ್ದು ತಂದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಘಟನೆ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.