ಶಿವಮೊಗ್ಗ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶಿವಮೊಗ್ಗದ ರಾಗಿಗುಡ್ಡ ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಪ್ರಮೋದ್ ಮುತಾಲಿಕ್ ಅವರ ಭೇಟಿಗೆ ಜಿಲ್ಲಾಡಳಿತ ಅವಕಾಶ ನೀಡದೇ ನಿರ್ಬಂಧ ವಿಧಿಸಿದೆ. ಪೊಲೀಸ್ ಇಲಾಖೆಯ ಕೋರಿಕೆ ಮೇರೆಗೆ ಅಕ್ಟೋಬರ್ 17 ರಿಂದ 30 ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡದಂತೆ ಮುತಾಲಿಕ್ಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಆದೇಶಿಸಿದ್ದಾರೆ.
ಅ.1 ರಂದು ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಹಾನಿಯಾದ ಮನೆಗಳಿಗೆ ಇಂದು ಮುತಾಲಿಕ್ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಮಂಗಳವಾರ ರಾತ್ರಿ ಬಸ್ನಲ್ಲಿ ಬರುತ್ತಿದ್ದ ವೇಳೆ ತಡರಾತ್ರಿ 2 ಗಂಟೆಗೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿ ಬಸ್ ತಡೆದ ಪೊಲೀಸರು, ಮುತಾಲಿಕ್ ಅವರನ್ನು ವಶಕ್ಕೆ ಪಡೆದು ನಿರ್ಬಂಧದ ಆದೇಶ ಪ್ರತಿ ನೀಡಿದರು. ಆ ನಂತರ ಪೊಲೀಸ್ ಬೆಂಗಾವಲು ವಾಹನದೊಂದಿಗೆ ಪ್ರತ್ಯೇಕ ಕಾರಿನಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ದಾವಣಗೆರೆಗೆ ಪೊಲೀಸರು ಕಳುಹಿಸಿ ಕೊಟ್ಟಿದ್ದಾರೆ