ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು, ಈ ಬಾರಿ ದಾಖಲೆಯ 73 ಕ್ಕಿಂತ ಹೆಚ್ಚು ಮತದಾನವಾಗಿದೆ. ಕಳೆದ ಬಾರಿಗಿಂತಲೂ ಶೇಕಡಾವಾರು ಪ್ರಮಾಣದ ಮತದಾನ ಈ ಬಾರಿ ಹೆಚ್ಚಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ಮತದಾರರಲ್ಲಿ ನಾಲ್ವರು ಹೃದಯಘಾತ ಮತ್ತಿತರ ಕಾರಣಗಳಿಂದ ಮೃತಪಟ್ಟರೆ, ಮತ್ತೊಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ತೋಕರೆ ಗ್ರಾಮದ ಪುಟ್ಟಸ್ವಾಮಿ (50) ಮತಚಲಾಯಿಸಿ ಮನೆಗೆ ವಾಪಾಸುಗುತ್ತಿದ್ದಾಗ ಮಾರ್ಗ ಮಧ್ಯೆ ಆನೆ ದಾಳಿಗೆ ಬಲಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾದರಹಳ್ಳಿಯ ರಾಮಣ್ಣ (70) ಮತದಾನ ಮಾಡಿದ ನಂತರ ಮನೆಯಲ್ಲಿ ಪಾರ್ಶ್ವವಾಯುವಿನಿಂದ ನಿಧನರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಘರ್ವಿ ಗ್ರಾಮದ ಪಾರವ್ವ ಈಶ್ವರ ಸಿದ್ದಾಳ (68) ಮತಗಟ್ಟೆ ಕೇಂದ್ರದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಜಯಣ್ಣ (49) ಮತ ಚಲಾಯಿಸಿ ಮತಗಟ್ಟೆಯಿಂದ ಹೊರಬಂದ ಕೂಡಲೇ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೇಣುಕಾಪುರದಲ್ಲಿ ಅಮಿತ್ ಸಾಬ್ (56) ಹೃದಯಾಘಾತದಿಂದ ನಿಧನರಾಗಿದ್ದಾರೆ.