ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ (Kamal Nath) ಅವರು ಬಿಜೆಪಿಗೆ ಜಂಪ್ ಮಾಡುತ್ತಾರೆ ಎಂಬ ವದಂತಿಗಳಿಗೆ ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijay Singh) ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಮಲ್ ನಾಥ್ ಅವರ ನಿಷ್ಠೆ ಕಾಂಗ್ರೆಸ್ (Congress) ಜೊತೆಗಿದೆ. ಕಮಲ್ ನಾಥ್ ಅವರು ಕಾಂಗ್ರೆಸ್ ನ ಭಾಗವಾಗಿದ್ದಾರೆ. ಹೀಗಾಗಿ ಅವರು ಯಾವತ್ತೂ ಬೇರೆ ಪಕ್ಷಕ್ಕೆ ಹಾರಲಾರರು. ಅವರು ಇಂದು, ಮುಂದೆ ಹಾಗೂ ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ಒತ್ತಿ ಹೇಳಿದರು.
ಛಿಂದ್ವಾರ ಸಂಸದ, ಪುತ್ರ ನಕುಲ್‌ನಾಥ್ ಜೊತೆ ಸೇರಿ ಕಮಲ್‌ನಾಥ್ 12 ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿ (BJP) ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಧ್ಯಪ್ರದೇಶ ಪ್ರವೇಶವಾಗುವ ಹೊತ್ತಲ್ಲೇ ಈ ವಿಚಾರ ಕೇಳಿಬಂದಿತ್ತು.
ಸದ್ಯಕ್ಕೆ ಕಮಲ್ ನಾಥ್ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಪಕ್ಷವನ್ನು ಬದಲಾಯಿಸುವ ಕುರಿತು ಕಮಲ್ ನಾಥ್ ಅವರನ್ನು ಹೇಳಿದಾಗ ನೀವೆಲ್ಲ ಯಾಕೆ ಉತ್ಸುಕರಾಗಿದ್ದೀರಿ. ಹಂಗೆ ಏನಾದರೂ ಇದ್ದರೆ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.