ಕೊಪ್ಪಳ: ನಾನು ವಾಪಸ್ ಬಿಜೆಪಿಗೆ ಸೇರುವ, ಪಕ್ಷ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ಇನ್ನೂ ಕಾಂಗ್ರೆಸ್ ಸೇರುವುದಂತೂ ಕನಸಿನಲ್ಲೂ ಆಗದ ಮಾತು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮೆಚ್ಚಿದ್ದಾರೆ. ಈ ಹಿನ್ನೆಲೆ ಜನರ ಆಶಯಕ್ಕೆ ಪೂರಕವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿಗೆ ನಾನು ಸಿದ್ಧನಿದ್ದೇನೆ. ಹಾಗೆಂದು ಕೆಆರ್‌ಪಿಪಿಯನ್ನು (KRPP) ವಿಲೀನ ಮಾಡುವುದಿಲ್ಲ. ನನ್ನ ಜೊತೆ ಮಾತನಾಡಿರುವ ಹಿರಿಯರಿಗೆ ನನ್ನ ವಿಚಾರ ಹೇಳಿದ್ದೇನೆ. ರಾಜ್ಯಸಭೆ ಚುನಾವಣೆ ಬಗ್ಗೆ ನನ್ನ ಜೊತೆ ಯಾರು ಮಾತನಾಡಿಲ್ಲ ಎಂದಿದ್ದಾರೆ.
ಮುಂದುವರೆದು, ನಾನು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತಮ ಸ್ನೇಹಿತರು. ನಮ್ಮದು ಇಪ್ಪತ್ತು ವರ್ಷದ ಸಂಬಂಧ. ಸ್ನೇಹವೇ ಬೇರೆ ರಾಜಕಾರಣವೇ ಬೇರೆ. ಹಾಗಂತಾ ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದರೆ ಅದು ಸುಳ್ಳು. ಕನಸಿನಲ್ಲಿಯೂ ಅದು ಸಾಧ್ಯವಿಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅನುದಾನ ನೀಡಲು ತಾರತಮ್ಯ ಮಾಡುತ್ತಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಈ ಬಾರಿ 100 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದಿದ್ದಾರೆ.