ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡ ಹಿನ್ನೆಲೆ ಮುಂದಿನ 9 ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ. ಉಳಿದ ದಿನಗಳು ಸಾಧಾರಣ ಮಳೆ ಆಗಲಿದೆ. ರಾಜ್ಯದಲ್ಲಿ ಮಳೆ ಕೊರತೆ ಇಲ್ಲ. ಜೂನ್ 21ರಂದು 70% ಮಳೆ ಕೊರತೆ ಇತ್ತು. ಆದರೆ ಈಗ ಮಳೆ ಹೆಚ್ಚಾಗಿದ್ದು, ಕೊರತೆ ಇಲ್ಲ. ಇಲ್ಲಿಯವರೆಗೆ 40.5% ಮಳೆ ಆಗಬೇಕಿತ್ತು. ಆದರೆ 40.8% ಮಳೆ ಆಗಿದ್ದು, 0.55 ಜಾಸ್ತಿಯೇ ಮಳೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಹೇಳಿದ್ದಾರೆ.
ಎಲ್ಲೆಲ್ಲಿ ಏನಾಗಿದೆ?
ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ವಿವಿಧೆಡೆ ನಾಲ್ವರು ಬಲಿ ಆಗಿದ್ದಾರೆ. ಬಸವಕಲ್ಯಾಣದ ಧನ್ನೂರಿನಲ್ಲಿ ಯುವಕನೊಬ್ಬ ಹಳ್ಳದ ಪಾಲಾಗಿದ್ದಾನೆ. ವಿಜಯಪುರದ ಕನ್ನೂರಿನಲ್ಲಿ ಮನೆ ಗೋಡೆ ಕುಸಿದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಹರಿಹರದ ಕುಂಬಳೂರಿನಲ್ಲಿ ಗೋಡೆ ಕುಸಿದು ಒಂದು ವರ್ಷದ ಹೆಣ್ಣು ಮಗು ಮೃತಪಟ್ಟಿದೆ.