ಬೆಂಗಳೂರು: ಕಾವೇರಿ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡೋದರಲ್ಲಿ ಅರ್ಥವಿಲ್ಲ, ಅವರಿಗೂ ಜವಾಬ್ದಾರಿ ಇದೆ. ರಾಜಕೀಯ ಬೇರೆ ರೀತಿಯಲ್ಲಿ ಬಿಜೆಪಿಯವರು ಮಾಡಲಿ ಎಂದು ಗೃಹಸಚಿವ ಡಾ ಜಿ ಪರಮೇಶ್ವರ್ ಕಿಡಿಕಾರಿದ್ದಾರೆ. ಮಂಡ್ಯ ಬಂದ್ಗೆ ಬಿಜೆಪಿ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಮಾಡಲು ನಮ್ಮ ತಕರಾರು ಇಲ್ಲ. ಆದರೆ, ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ನಾನು ಮನವಿ ಮಾಡಿಕೊಳ್ತೀನಿ. ಬಿಜೆಪಿ ಸಹ ಈ ವಿವಾದದಲ್ಲಿ ಭಾಗಿಗಳೇ, ಆದ್ದರಿಂದ ಅವರಿಗೂ ಜವಾಬ್ದಾರಿ ಇದೆ. ಇದರಲ್ಲಿ ರಾಜಕೀಯ ಮಾಡೋದರಲ್ಲಿ ಅರ್ಥವಿಲ್ಲ, ರಾಜಕೀಯ ಬೇರೆ ರೀತಿಯಲ್ಲಿ ಬಿಜೆಪಿಯವರು ಮಾಡಲಿ ಎಂದು ಹೇಳಿದರು. ಕಾವೇರಿ ವಿಚಾರದಲ್ಲಿ ನಾವು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ,
ಎಲ್ಲ ರೀತಿಯಲ್ಲಿಯೂ ಕ್ರಮ ತೆಗೆದುಕೊಂಡಿದ್ದೀವಿ. ಸರ್ವ ಪಕ್ಷ ಸಭೆಯಲ್ಲಿ ಎಲ್ಲ ವಿವರಣೆ ನೀಡಿದ್ದೇವೆ. ನೀರು ಬಿಡುವ ಮೊದಲು ಸರ್ವಪಕ್ಷ ಸಭೆ ಕರೆಯಲಾಗಿತ್ತು. ಆಮೇಲೆ ಎರಡನೇ ಸರ್ವ ಪಕ್ಷ ಸಭೆ ಕರೆದಿದ್ದು, ಎಲ್ಲ ಒಪ್ಪಿಕೊಂಡು ನಿಮ್ಮ ಜೊತೆಗೆ ಇರ್ತೀವಿ, ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರು ಸರ್ಕಾರದ ಜೊತೆ ಇರ್ತೀವಿ ಅಂತ ಹೇಳಿದ್ದಾರೆ. ಅದನ್ನೇ ನಾವು ನಿರೀಕ್ಷೆ ಮಾಡುತ್ತೇವೆ ಎಂದು ತಿಳಿಸಿದರು.
ಶನಿವಾರ ಮಂಡ್ಯ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಭಟನೆ ಮಾಡುವುದು ಅವರ ಹಕ್ಕು, ಅದರ ಬಗ್ಗೆ ನಮ್ಮದು ತಕರಾರು ಏನು ಇಲ್ಲ. ನೀರು ಬಿಡಬಾರದು ರಾಜ್ಯದ ಹಿತಾಸಕ್ತಿ ರಕ್ಷಣೆ ಮಾಡಲು ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಬಹುದು. ಯಾವುದೇ ರೀತಿಯಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದಾಗಲಿ, ಜನ ಸಾಮಾನ್ಯರಿಗೆ ತೊಂದರೆ ಮಾಡುವುದಾಗಲಿ, ಕಾನೂನು ಬಾಹಿರವಾಗಿ ಚಟುವಟಿಕೆಗಳು ಮಾಡಬಾರದು ಎಂದು ಮನವಿ ಮಾಡಿದರು.