ಚಿಕ್ಕಬಳ್ಳಾಪುರ;-ಸಚಿವ ಎಂ.ಸಿ.ಸುಧಾಕರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕಲ್ಲುಗಣಿಗಾರಿಕೆ ಏಕಾಏಕಿ ಬಂದ್ ಮಾಡುವುದು ಅಸಾಧ್ಯ ಎಂದು ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಕಲ್ಲುಕ್ವಾರಿ, ಕ್ರಷರ್ ಇತ್ಯಾದಿ ಕಲ್ಲುಗಣಿಗಾರಿಕೆಯನ್ನು ಏಕಾಏಕಿ ನಿಲ್ಲಿಸಲು ಆಗುವುದಿಲ್ಲ. ಅಕ್ರಮ ಗಣಿಗಾರಿಗೆ ನಡೆಯುತ್ತಿದ್ದಲ್ಲಿ ಇದರಿಂದ ಜನ ಜಾನುವಾರುಗಳಿಗೆ ಅಪಾಯವಾಗುತ್ತಿದ್ದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬಹುದು.ತಪ್ಪಿದ್ದಲ್ಲಿ ಕಾನೂನು ಬದ್ದವಾಗಿ ನಿಯಂತ್ರಣ ಹೇರಬಹುದು ಎಂದರು.
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಇಂದು ನಿನ್ನೆಯಿಂದ ನಡೆಯುತ್ತಿಲ್ಲ, ಹತ್ತಾರು ವರ್ಷಗಳಿಂದ ನಡೆಯುತ್ತಿದ್ದು , ಕಲ್ಲುಗಣಿಗಾರಿಕೆಗಿಂತ ಇದರ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್‌ಗಳಿಂದ ಜನಜೀವನಕ್ಕೆ ಭಾರೀ ಅಪಾಯ ಎದುರಾಗಿದೆ. ಇದರ ಬಗ್ಗೆ ಕ್ರಮಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್‌ಟಿಒ, ಎಸ್ಪಿ ಅವರಿಗೂ ಸೂಚನೆ ನೀಡಲಾಗಿದೆ. ನನಗೆ ಗೊತ್ತಿರುವ ಹಾಗೆ ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಇಲ್ಲಿ ಕ್ರಷರ್ ಸಂಸ್ಕೃತಿ ತಲೆಯೆತ್ತಿದೆ. ಇದನ್ನು ಕಾನೂನು ಮೂಲಕವೇ ಮಣಿಸಬೇಕೇ ವಿನಃ ದಿಢೀರ್ ತೀರ್ಮಾನಗಳಿಂದ, ಆತುರದ ನಿರ್ಧಾರಗಳಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕಲ್ಲು ಬಂಡೆಗಳ ಸ್ಪೋಟ, ಅದರಿಂದ ಮೇಲೇಳುವ ದೂಳು,ಗಾಳಿಯಲ್ಲಿ ತೇಲಿ ಬರುವ ನೈಟ್ರೇಟ್,ಪ್ಲೋರೈಡ್,ಯುರೇನಿಯಂನಿಂದ ಆಗುವ ಅಪಾಯದ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇದು ನಿಜವೇ ಆಗಿದ್ದಲ್ಲಿ. ಪರಿಸರ ಮತ್ತು ಮಾಲಿನ್ಯ ಇಲಾಖೆ ಮಾನದಂಡ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾನದಂಡಗಳನ್ನು ಮೀರಿದ್ದರೆ ಯಾವ ಕಾರಣಕ್ಕೂ ಮುಂದುವರೆಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.