ಮಂಡ್ಯ: ಶಾಸಕ ಕದಲೂರು ಉದಯ್ ಅವರು, ಸರ್ಕಾರ ಬೀಳಿಸಲು ಕಾಂಗ್ರೆಸ್ ಶಾಸಕರಿಗೆ 50ಕೋಟಿ ಆಫರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ಬೀಳಿಸುವುದು ಅಷ್ಟು ಸುಲಭದ ಮಾತಲ್ಲ. ಮೂರೇ ಮೂರು ಶಾಸಕರನ್ನ ಸೆಳೆಯುವುದು ಅಸಾಧ್ಯ. 136 ಜನ ಕಾಂಗ್ರೆಸ್ ಶಾಸಕರಿದ್ದಾರೆ, ಸ್ವತಂತ್ರ ಸರ್ಕಾರ ಇದೆ. ಹೀಗಿರುವಾಗ ಸರ್ಕಾರ ಬೀಳಿಸುವುದು ಅಸಾಧ್ಯದ ಮಾತು ಎಂದರು. ಇನ್ನೂ ಈ ಹಿಂದೆ ಮೈತ್ರಿ ಸರ್ಕಾರದ ಬೀಳಿಸಲು ನೀವು ಶ್ರಮಪಟ್ಟಿದ್ರಿ ಎಂಬ ಮಾತಿಗೆ ಉದಯ್ ನಸು ನಕ್ಕರು.
ಅದೆಲ್ಲಾ ಮುಗಿದ ಅಧ್ಯಾಯ, ಹಿಂದೆ ಇದ್ದ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಇಂದಿನ ಸರ್ಕಾರಕ್ಕೆ ಜನರೇ ಬಹುಮತ ಕೊಟ್ಟಿದ್ದಾರೆ. ಹೆಚ್ಡಿಕೆಗೆ ಸರ್ಕಾರ ಬೀಳಿಸುವ ತಾಕತ್ತು ಇಲ್ಲ. ತನ್ನ ಕೈಲಿದ್ದ ಸರ್ಕಾರವನ್ನೇ ಉಳಿಸಿಕೊಳ್ಳಲು ಅವರಿಂದ ಆಗಿಲ್ಲ. ಇನ್ನ ಸರ್ಕಾರ ಬೀಳಿಸುವ ತಾಕತ್ ಅವರಿಗೆ ಇಲ್ಲ. ಇನ್ನೊಬ್ಬರ ಕೆಡುಕನ್ನು ಬಯಸುವ ಕೆಲಸ ಮಾಡಬಾರದು. ಅದಕ್ಕಾಗೇ ಅವರು ಸರ್ಕಾರ ಕಳೆದುಕೊಂಡು, ಅಲ್ಲಿದ್ದಾರೆ. ನಾನು ಗೆದ್ದು ಆಡಳಿತ ಪಕ್ಷದಲ್ಲಿದ್ದೇನೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಶಾಸಕನಾಗಿ ಆಯ್ಕೆ ಆಗಿದ್ದೇನೆ. ಮೊದಲು ನನ್ನ ವ್ಯಾಪ್ತಿಯಲ್ಲಿ ಏನೆಲ್ಲಾ ಕೆಲಸ ಮಾಡಬಹುದೊ ಮಾಡ್ತೇನೆ ಎಂದರು.