ಮಂಗಳೂರು: ನೀತಿ, ನೇತೃತ್ವಹೀನ, ನಿಯತ್ತಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇರುವ ಐಎನ್ಡಿಐಎ, ಯಾವುದೇ ಹೆಸರಿನಲ್ಲಿ ಲೋಕಸಭಾ ಚುನಾವಣೆಗೆ ಇಳಿದರೂ ಕೂಡ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಎನ್ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದ ಜನರು, ಸಂವಿಧಾನಕ್ಕೆ, ಇಡೀ ಭಾರತಕ್ಕೆ ನಮ್ಮ ನಿಯತ್ತು ಎಂದು ನಾವು ಸಾಬೀತುಪಡಿಸಿದ್ದೇವೆ. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಐಎನ್ಡಿಐಎ ನಡೆದುಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು.
ಅವರ ನೀತಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಚೀನಾದ ಜೊತೆಗಿನ ಕಾಂಗ್ರೆಸ್ ಒಡಂಬಡಿಕೆ ಹಲವು ಅನುಮಾನಗಳನ್ನು ಸೃಷ್ಟಿ ಮಾಡಿದೆ. ಪ್ರತಿ ಬಾರಿ ವಿದೇಶಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾತನಾಡುವ ಕಾಂಗ್ರೆಸ್ಸಿನ ನೇತಾರ ರಾಹುಲ್ ಗಾಂಧಿಯವರ ನಿಯತ್ತು ಒಂದು ಪ್ರಶ್ನಾರ್ಥಕ ಚಿಹ್ನೆ ಹುಟ್ಟು ಹಾಕುವಂತಿದೆ ಎಂದು ತಿಳಿಸಿದರು.