ನವದೆಹಲಿ: : ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಅವರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ತನ್ನ ಹೆಸರಾಂತ ಸನ್ಯಾಸಿಗಳಲ್ಲಿ ಒಬ್ಬರಾದ ಅಮೋಘ ಲೀಲಾ ದಾಸ್ ಅವರ ಮೇಲೆ ಇಸ್ಕಾನ್ ಒಂದು ತಿಂಗಳ ಮಟ್ಟಿಗೆ ನಿಷೇಧ ಹೇರಿದೆ. ಈ ಸಂಬಂಧ ಇಸ್ಕಾನ್ ಹೇಳಿಕೆ ಬಿಡುಗಡೆ ಮಾಡಿದೆ.
ಅಮೋಘ ಲೀಲಾ ದಾಸ್ ಅವರು ಆಧ್ಯಾತ್ಮಿಕ ಸ್ಫೂರ್ತಿ ತುಂಬುವ ಭಾಷಣಕಾರರಾಗಿದ್ದು, ಅವರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಜನಪ್ರಿಯವಾಗಿವೆ. ಇತ್ತೀಚೆಗೆ ಅವರು ಪ್ರವಚನ ಒಂದನ್ನು ನೀಡುವ ವೇಳೆ, ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸುತ್ತಿದ್ದುದ್ದನ್ನು ಪ್ರಶ್ನಿಸಿದ್ದರು. ಸದ್ಗುಣಶೀಲ ವ್ಯಕ್ತಿಯು ಯಾವುದೇ ಪ್ರಾಣಿಗೆ ಹಾನಿ ಉಂಟುಮಾಡುವಂತಹ ಯಾವುದನ್ನೂ ಸೇವಿಸುವುದಿಲ್ಲ ಎಂದು ಅವರು ಹೇಳಿದ್ದರು.
“ಸುಗುಣಶೀಲ ವ್ಯಕ್ತಿ ಎಂದಾದರೂ ಮೀನು ತಿನ್ನುತ್ತಾರೆಯೇ? ಮೀನು ಕೂಡ ನೋವನ್ನು ಅನುಭವಿಸುತ್ತದೆ, ಅಲ್ಲವೇ? ಹಾಗಾದರೆ ಸದ್ಗುಣಶೀಲ ವ್ಯಕ್ತಿ ಮೀನು ಸೇವಿಸುತ್ತಾರೆಯೇ?” ಎಂದು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡುವಾಗ ಅವರು ಪ್ರಶ್ನಿಸಿದ್ದರು. ಇದೇ ವೇಳೆ ಸ್ವಾಮಿ ವಿವೇಕಾನಂದ ಅವರ ಗುರು ರಾಮಕೃಷ್ಣ ಪರಮಹಂಸರ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದರು
ಅಮೋಘ ಲೀಲಾ ದಾಸ್ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಒಳಗಾಗಿದೆ. ಜನರು ಬಹಳ ಗೌರವಿಸುವ ಹಾಗೂ ಆರಾಧಿಸುವ ವ್ಯಕ್ತಿಗಳ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ ಸನ್ಯಾಸಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅನೇಕರು ಇಸ್ಕಾನ್ ಅನ್ನು ಆಗ್ರಹಿಸಿದ್ದರು.