ಬೆಂಗಳೂರು: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣದ ತನಿಖೆ ಪ್ರಾರಂಭವಾಗಿದೆ, ಅದಕ್ಕಾಗಿ ಕೆಲವು ವಿಷಯ ಹೇಳಲು ಬರಲ್ಲ ಎಂದು ಸದಬದಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಿಮಗೆ ವಿಶ್ವಾಸ ಇಲ್ಲದೆ ಇರಬಹುದು, ಆದರೆ ನಮಗೆ ವಿಶ್ವಾಸ ಇದೆ. ಜೈನಮುನಿ ಹತ್ಯೆ ಪೂರ್ವ ನಿಯೋಜಿತ ಎಂದಿದ್ದೀರಿ, ಇರಬಹುದು. ತನಿಖೆ ಆದಮೇಲೆ ತಾನೇ ಗೊತ್ತಾಗೋದು ಎಂದರು. ತನಿಖೆ ಮಾಡಿದರೆ ಸತ್ಯ ಹೊರಗೆ ಬರುವುದು ಎಂದು ಬೊಮ್ಮಾಯಿ ಹೇಳಿದಾಗ, ಇಂತಹ ಕೊಲೆ ಉತ್ತರ ಭಾರತದಲ್ಲಿ ನಡೆದ ಉದಾಹರಣೆ ಇಲ್ಲವೇ? ಎಂದು ಪರಮೇಶ್ವರ್ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಬೊಮ್ಮಾಯಿ, ಇದನ್ನು ಅದಕ್ಕೆ ಹೋಲಿಕೆ ಮಾಡಿ ಹೇಳುತ್ತೀರಾ? ಆ ರೀತಿ, ಈ ರೀತಿ ಅನ್ನೋದು ಅಲ್ಲ, ಪ್ರತಿಷ್ಠೆ ಬಿಡಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇದರಲ್ಲಿ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲ, ತನಿಖೆ ಮಾಡುತ್ತಿದ್ದೇವೆ. ಪೊಲೀಸರು ಸಮರ್ಥವಾಗಿದ್ದಾರೆ, ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ ಎಂದರು.