ಬ್ಲೂಮಿಂಗ್ಟನ್:ಅಮೆರಿಕದ ಮಿನ್ನೇಸೋಟ ಪ್ರಾಂತ್ಯದ ಬ್ಲೂಮಿಂಗ್ಟನ್ ನಗರದ ವ್ಯಕ್ತಿಯೋರ್ವ ಬಿಯರ್ನಿಂದ ಚಲಿಸುವ ಮೋಟಾರ್ಸೈಕಲ್ ಅನ್ನು ಆವಿಷ್ಕರಿಸಿ ಸಕ್ಸಸ್ ಕಂಡಿದ್ದಾರೆ. ರಾಕೆಟ್ಮ್ಯಾನ್ ಎಂದೇ ಕರೆಯಲ್ಪಡುವ ಕಿ ಮೈಕೆಲ್ಸನ್ ಈ ನೂತನ ಸಂಶೋಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
“ಇದು 14 ಗ್ಯಾಲನ್ ಕೆಗ್ ಸಾಮರ್ಥ್ಯದ ಟ್ಯಾಂಕ್ ಹೊಂದಿದ್ದು, ಅನಿಲ ಚಾಲಿತ ಎಂಜಿನ್ ಬದಲಿಗೆ ಹೀಟಿಂಗ್ ಕಾಯಿಲ್ ಅನ್ನು ಹೊಂದಿದೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿವರೆಗೆ ಬಿಸಿ ಮಾಡುತ್ತದೆ. ಅದು ನಂತರ ಬೈಕ್ ಅನ್ನು ಮುಂದಕ್ಕೆ ಚಲಿಸುವಂತೆ ಮಾಡಲು ಸೂಪರ್ ಹೀಟೆಡ್ ಸ್ಟೀಮ್ ಆಗುತ್ತದೆ,’ ಎಂದು ಮೈಕೆಲ್ಸನ್ ಹೇಳಿದ್ದಾರೆ.
“ಈ ಬೈಕ್ ಗಂಟೆಗೆ 240 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಬ್ಲೂಮಿಂಗ್ಟನ್ನಲ್ಲಿರುವ ನನ್ನ ಗ್ಯಾರೆಜ್ನಲ್ಲೇ ಇದನ್ನು ತಯಾರಿಸಲಾಗಿದೆ. ಪೆಟ್ರೋಲ್ ಮತ್ತು ಅನಿಲ ದರ ಏರಿಕೆ ಆಗುತ್ತಿದೆ. ಹೀಗಾಗಿ ಇದಕ್ಕಿಂತ ಕಡಿಮೆ ದರದ ಇಂಧನ ಆವಿಷ್ಕಾರಕ್ಕಾಗಿ ಈ ಸಂಶೋಧನೆ ನಡೆಸಿದ್ದೇನೆ,” ಎಂದು ತಿಳಿಸಿದ್ದಾರೆ.
ಈ ಬೈಕ್ ಅನ್ನು ಮೈಕೆಲ್ಸನ್ ಇದುವರೆಗೂ ರಸ್ತೆಗೆ ಇಳಿಸಿಲ್ಲ. ಪರೀಕ್ಷೆಗಾಗಿ ಶೀಘ್ರದಲ್ಲೇ ರಸ್ತೆಗೆ ತರಲಾಗುವುದು. ಇದನ್ನು ಕೆಲವು ವಾಹನ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗಿದ್ದು, ಈ ಆವಿಷ್ಕಾರಕ್ಕೆ ಪ್ರಥಮ ಬಹುಮಾನ ಬಂದಿದೆ ಎಂದು ತಿಳಿಸಿದ್ದಾರೆ. ಬಹುತೇಕ ಈ ಆವಿಷ್ಕಾರವು ಸಾರ್ವಜನಿಕ ಬಳಕೆಗೆ ಸಿಗುವುದು ಅನುಮಾನವಾಗಿದೆ.