ಶಿವಮೊಗ್ಗ: ಬೆಳಗಾವಿ ಜೈನ ಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ಇದರ ಹಿಂದಿರುವ ಅಂತಾರಾಷ್ಟ್ರೀಯ ಷಡ್ಯಂತ್ರ ಬಯಲಾಗಲಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ಕೂಡ ಉಳಿಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜೈನ ಸಮುದಾಯದವರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜೈನ ಮುನಿ ಕಗ್ಗೊಲೆ ಆಗಿರುವುದು ರಾಜ್ಯಕ್ಕೆ ಕಳಂಕ ಹಾಗೂ ನಾವು ಇತಿಹಾಸದಲ್ಲೂ ಕಂಡಿರಲಿಲ್ಲ. ಜೈನಮುನಿ ವೈಯಕ್ತಿಕ ಸುಖ ಶಾಂತಿ ಅಪೇಕ್ಷೆ ಮಾಡದೆ ಸಮಾಜಕ್ಕೆ ಶಾಂತಿ ಬಯಸುವವರು. ಅಂಥವರನ್ನು ವಿದ್ಯುತ್ ಶಾಕ್ ನೀಡಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಬಿಸಾಡಿ ಹೋಗಿದ್ದಾರೆ. ಇದು ಸಾಧಾರಣ ಕೃತ್ಯವಲ್ಲ.! ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂಬುದು ರಾಜ್ಯದ ಹಾಗೂ ಇಡೀ ದೇಶದ ಜನರ ಅಭಿಪ್ರಾಯ.
ಇಡೀ ರಾಷ್ಟ್ರದಲ್ಲಿ ಅಹಿಂಸಾವಾದಿಗಳು ಆಕ್ರೋಶಗೊಂಡಿದ್ದಾರೆ. ಸಿಬಿಐಗೆ ನೀಡಬೇಕು ಎಂಬುದು ಒಕ್ಕೊರಲ ಅಭಿಪ್ರಾಯ. ಇದನ್ನ ಸಿಬಿಐಗೆ ನೀಡದೆ ಇದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಅನ್ನೋದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ. ಯಾರೋ ಇಬ್ಬರನ್ನು ಅರೆಸ್ಟ್ ಮಾಡಿ ತನಿಖೆ ಹಾದಿ ತಪ್ಪಿಸಬಾರದು ಎಂದು ಈಶ್ವರಪ್ಪ ಹೇಳಿದರು.