ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಸೋಮವಾರ ಭದ್ರತಾ ಪಡೆಗಳು ಗಡಿಯಾಚೆಯಿಂದ ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಗ್ವಾರ್ ಸೆಕ್ಟರ್ನಲ್ಲಿ ಭದ್ರತಾ ಪಡೆಗಳು ಕೆಲ ಭಯೋತ್ಪಾದಕರ ಚಲನವಲನಗಳನ್ನು ಗಮನಿಸಿದ್ದು, ಬಳಿಕ ಒಳನುಸುಳಲು ಪ್ರಯತ್ನಿಸುತ್ತಿದ್ದುದನ್ನು ಗಮನಿಸಿ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ. ಆದರೆ ಆತನ ಮೃತದೇಹವನ್ನು ಇನ್ನೂ ಪಡೆಯಲಾಗಿಲ್ಲ ಎಂದು ಹೇಳಿದ್ದಾರೆ.
ಸೋಮವಾರ ಮುಂಜಾನೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪೂಂಚ್ನಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇಬ್ಬರು ಭಯೋತ್ಪಾದಕರು ಗಡಿ ಪ್ರವೇಶಿಸಲು ಪ್ರಯತ್ನಿಸಿದ್ದು, ಅದರಲ್ಲಿ ಒಬ್ಬನನ್ನು ಕೊಲ್ಲಲಾಗಿದೆ. ಇನ್ನೊಬ್ಬ ಭಯೋತ್ಪಾದಕ ಹಿಂದಕ್ಕೆ ಓಡಲು ಪ್ರಯತ್ನಿಸಿದ್ದಾನೆ. ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಜಮ್ಮುವಿನ ಪಿಆರ್ಒ (ರಕ್ಷಣಾ) ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಹೇಳಿದ್ದಾರೆ.