ರಾಜ್ಯಾದ್ಯಂತ ಪುನರಾಂಭವಾಗಲಿದೆ ಇಂದಿರಾ ಕ್ಯಾಂಟೀನ್: ಬರಲಿದೆ ಹೊಸ ಮೆನು

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ಸಿದ್ಧತೆಗಳು ಜೋರಾಗಿ ಸಾಗಿವೆ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಯ ಹೊಣೆ ಹೊತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಇದಕ್ಕಾಗಿ ಒಂದು ಮೆನುವನ್ನು ಸಿದ್ಧಪಡಿಸಿದೆ. ಅದರಂತೆ, ಬ್ರೆಡ್ – ಜ್ಯಾಮ್, ಮಂಗಳೂರು ಬನ್, ಮುದ್ದೆ – ಸೊಪ್ಪಿನ ಸಾರು ಹಾಗೂ ಪಾಯಸವನ್ನು ನೀಡಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬಿಬಿಎಂಪಿ ಸಿದ್ದಪಡಿಸಿರುವ ಈ ಮೆನುವಿಗೆ ಎಷ್ಟು ಟೆಂಡರ್ ಮೊತ್ತ ನಿಗದಿಪಡಿಸಬೇಕು ಎಂಬಿತ್ಯಾದಿಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಎಲ್ಲವೂ ನಿರ್ಧಾರವಾಗಿ, ರಾಜ್ಯ ಸರ್ಕಾರದ ಒಪ್ಪಿಗೆಯಷ್ಟೇ ಬಾಕಿ ಇದ್ದು, ಬಹುತೇಕ ಇದೇ ಮೆನು ಜಾರಿಯಾಗುವ ಸಾಧ್ಯತೆಗಳಿವೆ.

ಏನಿದೆ ಹೊಸ ಮೆನುವಿನಲ್ಲಿ?

ಸಾಮಾನ್ಯವಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ, ಉಪ್ಪಿಟ್ಟು, ಪಲಾವ್ ಮುಂತಾದವು ಸಿಗುತ್ತಿದ್ದವು. ಈಗ ಬಿಬಿಎಂಪಿ ಸಿದ್ಧಪಡಿಸಿರುವ ಮೆನುವಿನಲ್ಲಿ ಪ್ರತಿ ದಿನ ಬೆಳಗ್ಗೆ ಇಂದಿರಾ ಕ್ಯಾಂಟೀನ್ ನಲ್ಲಿ ಸಾಮಾನ್ಯವಾಗಿ ಸಿಗುವ ತಿಂಡಿಗಳಾದ ಇಡ್ಲಿ – ವಡೆ, ದೋಸೆ, ಉಪ್ಪಿಟ್ಟು, ಪಲಾವ್, ಚಿತ್ರನ್ನದಂಥ ಐಟಂಗಳ ಪಟ್ಟಿಯಲ್ಲಿ ಬ್ರೆಡ್ ಜ್ಯಾಮ್ ಸೇರಿಸಲು ನಿರ್ಧರಿಸಲಾಗಿದೆ. ಆ ಪಟ್ಟಿಯಲ್ಲಿ ಮಂಗಳೂರು ಬನ್ ಗಳನ್ನೂ ಸೇರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಮಧ್ಯಾಹ್ನದ ಊಟಕ್ಕೆ ಮುದ್ದೆಸೊಪ್ಪು ಸಾರು

ಅಂದಹಾಗೆ, ಮಧ್ಯಾಹ್ನದ ಊಟದಲ್ಲಿ ರಾಗಿ ಮುದ್ದೆ – ಸೊಪ್ಪಿನ ಸಾರು ಎಂಬ ಹೊಸ ಐಟಂ ಸೇರಿಸಲಾಗಿದೆ. ಈ ಮೊದಲು ಮುದ್ದೆ ಕೊಡಲಾಗುತ್ತಿತ್ತು. ಅದಕ್ಕೆ ತರಕಾರಿ ಸಾಂಬಾರ್ ನೀಡಲಾಗುತ್ತಿತ್ತು. ಈ ವರ್ಷದಿಂದ ಮಧ್ಯಾಹ್ನದ ಊಟಕ್ಕೆ ಮುದ್ದೆ – ಸೊಪ್ಪಿನ ಸಾರು ನೀಡಲು ನಿರ್ಧರಿಸಲಾಗಿದೆ. ಆದರೆ, ಪ್ರತಿದಿನ ಮುದ್ದೆ ಇರೋದಿಲ್ಲ. ದಿನ ಬಿಟ್ಟು ದಿನ ಮುದ್ದೆ ಇರುತ್ತೆ ಎಂದು ಹೇಳಲಾಗಿದೆ.

ಹಾಗಾದರೆ ತರಕಾರಿ ಸಾಂಬಾರ್ ಗೆ ತಿಲಾಂಜಲಿ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಎರಡು ರೀತಿಯ ಸಾಂಬಾರುಗಳು ಸಿದ್ಧವಾಗಲಿವೆ ಎಂದು ಹೇಳಲಾಗಿದೆ. ಮುದ್ದೆ – ಸೊಪ್ಪು ಸಾರು ಇಷ್ಟಪಡುವವರು ಅದನ್ನು ಹಾಕಿಸಿಕೊಳ್ಳಬಹುದು. ಇನ್ನು ಅನ್ನಕ್ಕಾಗಿಯೇ ಸಾಂಬಾರ್ ಸಿದ್ಧಪಡಿಸಲಾಗುತ್ತದೆ. ಆ ಸಾಂಬಾರ್ ಇಷ್ಟಪಡುವವರು ಮುದ್ದೆಗೆ ಅದೇ ಸಾಂಬಾರನ್ನೂ ಬಳಸುವ ಆಯ್ಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಮುದ್ದೆ ಇರದ ದಿನ ಚಪಾತಿಪಲ್ಯ

ಅಂದಹಾಗೆ, ಮುದ್ದೆ – ಸೊಪ್ಪಿನ ಸಾರು ಕಾಂಬಿನೇಷನ್ ದಿನಾಲೂ ಇರೋದಿಲ್ಲ. ದಿನ ಬಿಟ್ಟು ದಿನ ಇರುತ್ತೆ. ಮುದ್ದೆ ಇರದ ದಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಚಪಾತಿ – ಪಲ್ಯ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಷ್ಟು ಗೋದಿ ಹಿಟ್ಟು ಬೇಕು, ಅದಕ್ಕೆ ಯಾವ ಪಲ್ಯ ನಿಗದಿಗೊಳಿಸಬೇಕು ಎಂಬುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಪಾಯಸ ಸೇರ್ಪಡೆ

ಬಹಳ ಪ್ರಮುಖವಾದ ವಿಚಾರವೇನೆಂದರೆ, ಇಂದಿರಾ ಕ್ಯಾಂಟೀನ್ ಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಪಾಯಸ ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ ಹಲವಾರು ಧಾನ್ಯಗಳಿಂದ ಪಾಯಸ ತಯಾರಿಸಲಾಗುತ್ತೆದ. ಹೆಸರು ಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋಧಿ, ಅಕ್ಕಿ ಅಥವಾ ಸಬ್ಬಕ್ಕಿಯಿಂದ ಪಾಯಸ ತಯಾರಿಸಲಾಗುತ್ತದೆ. ಇವುಗಳಲ್ಲಿ ಯಾವುದನ್ನು ಇಂದಿರಾ ಕ್ಯಾಂಟೀನ್ ನಲ್ಲಿ ವಿತರಿಸಲಾಗುತ್ತದೆ ಎಂಬುದು ಬಹಿರಂಗವಾಗಿಲ್ಲ. ಆದರೆ, ಪಾಯಸ ನೀಡುವ ವಿಚಾರವಂತೂ ಫೈನಲ್ ಆಗಿದೆ ಎಂದು ಹೇಳಲಾಗಿದೆ.

Loading

Leave a Reply

Your email address will not be published. Required fields are marked *