ನವದೆಹಲಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ 19 ಪಾಕ್ ನಾವಿಕರನ್ನು (Pak Sailors) ಭಾರತೀಯ ನೌಕಾಪಡೆ (Indian Navy) ರಕ್ಷಿಸಿದೆ. 2 ದಿನಗಳಲ್ಲಿ ನಡೆದ ಎರಡನೇ ಕಾರ್ಯಾಚರಣೆ ಇದಾಗಿದೆ.
ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಮೀನುಗಾರಿಕಾ ಹಡಗನ್ನು ಅಪಹರಿಸಿದ್ದರು. ಭಾರತೀಯ ಯುದ್ಧನೌಕೆ INS ಸುಮಿತ್ರಾ, 19 ಪಾಕಿಸ್ತಾನಿ ನಾವಿಕರನ್ನು ರಕ್ಷಿಸಿದೆ. 36 ಗಂಟೆಗಳಲ್ಲಿ ಯುದ್ಧನೌಕೆ ನಡೆಸಿದ 2ನೇ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ಇದಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಇರಾನ್ ಧ್ವಜದ ಮೀನುಗಾರಿಕೆ ಹಡಗು ಎಫ್‌ವಿಅಲ್ ನಯೀಮಿಯನ್ನು 11 ಸಶಸ್ತ್ರ ಕಡಲ್ಗಳ್ಳರು ಹತ್ತಿದರು. ಅವರು 19 ಸಿಬ್ಬಂದಿಯನ್ನು (ಎಲ್ಲಾ ಪಾಕಿಸ್ತಾನಿಗಳು) ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದರು. ಭಾರತೀಯ ನೌಕಾಪಡೆಯ ಯುದ್ಧನೌಕೆಯು ಮೀನುಗಾರಿಕಾ ಹಡಗನ್ನು ತಡೆಹಿಡಿದು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಕಡಲ್ಗಳ್ಳರನ್ನು ಒತ್ತಾಯಿಸಿತು. ನಂತರ ಹಡಗನ್ನು ಹತ್ತಿದ ಭಾರತೀಯ ನೌಕಾಪಡೆ, ಅಪಹರಣಕ್ಕೊಳಗಾಗಿದ್ದ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು.
ಸೊಮಾಲಿಯಾ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಮತ್ತೊಂದು ಇರಾನಿನ ಧ್ವಜದ ಮೀನುಗಾರಿಕಾ ನೌಕೆ ಎಫ್‌ವಿ ಇಮಾನ್‌ನಿಂದ ಎಸ್‌ಒಎಸ್ ಕರೆಗೆ ಐಎನ್‌ಎಸ್ ಸುಮಿತ್ರಾ ಪ್ರತಿಕ್ರಿಯಿಸಿದ ಒಂದು ದಿನದ ನಂತರ ತ್ವರಿತ ರಕ್ಷಣೆ ಮಾಡಲಾಗಿತ್ತು. ಹಡಗಿನ 17 ಇರಾನ್ ಸಿಬ್ಬಂದಿಯನ್ನು ನೌಕಾಪಡೆ ರಕ್ಷಿಸಿತ್ತು.
INS ಸುಮಿತ್ರಾ, ಭಾರತೀಯ ನೌಕಾಪಡೆಯ ಸ್ಥಳೀಯ ಕಡಲಾಚೆಯ ಗಸ್ತು ನೌಕೆಯಾಗಿದೆ. ಸೋಮಾಲಿಯಾ ಮತ್ತು ಗಲ್ಫ್ ಆಫ್ ಅಡೆನ್‌ನ ಪೂರ್ವದಲ್ಲಿ ಕಡಲ್ಗಳ್ಳತನ ಮತ್ತು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ಇದನ್ನು ನಿಯೋಜಿಸಲಾಗಿದೆ.